ಸುಂಟಿಕೊಪ್ಪ, ಫೆ. 27: ಇಲ್ಲಿಗೆ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಕೆಲ ಗ್ರಾಮಸ್ಥರಿಗೆ ತೋಡಿನಲ್ಲಿ ಹರಿದು ಬರುತ್ತಿರುವ ಕಾಫಿ ಪÀಲ್ಪರ್ ಮಾಡಿದ ಕಲುಷಿತ ನೀರಿನಿಂದ ರೋಗರುಜಿನ ಗಳು ಬಂದಿವೆ. ಜಾನುವಾರುಗಳು ಸಹ ತೋಡಿನ ನೀರನ್ನು ಕುಡಿಯಲು ಸಾಧ್ಯವಾಗದೇ ಕಲುಷಿತ ನೀರಿನ ದುರ್ವಾಸನೆಯಿಂದ ಇಡೀ ವಾತಾವರಣ ಕಲುಷಿತಗೊಂಡಿದೆ.

ಇಲ್ಲಿಗೆ ಸಮೀಪದ ಎಮ್ಮೆಗುಂಡಿ ತೋಟ ಹಾಗೂ ಲೆಬ್ಬೆ ಕಾಫಿ ತೋಟದಿಂದ ಕಾಫಿ ಪÀಲ್ಪರ್ ಮಾಡಿದ ಕಲುಷಿತ ನೀರು ತೋಟದ ಒಳಗೆ ತೋಡಿದ ಕಾಫಿ ಸಿಪ್ಪೆ ಗುಂಡಿಯಿಂದ ಹೊರಬಂದು ಹರದೂರು ಗ್ರಾಮದ ಕಲ್ಲುಮುಟ್ಲು ಪುಟ್ಟಣ್ಣ, ಹರದೂರು ಬಾಲಪ್ಪ ಅವರ ಮನೆಯ 3 ಕುಟುಂಬದವರು ಹಾಗೂ ಮೇದೂರ ಸುರೇಶ್, ಹರದೂರು ಗ್ರಾಮದ ಜಯರಾಮ, ವರಪ್ರಸಾದ, ದೀಪಕ್ ಅವರ ಮನೆಯ ಸಮೀಪದಲ್ಲಿ ಹರಿದು ಹೋಗುತ್ತಿರುವ ತೋಡಿಗೆ ಸೇರುವದರಿಂದ ಗ್ರಾಮದ ಜನತೆ ದುರ್ವಾಸನೆಯಿಂದ ಉಸಿರು ಕಟ್ಟುವ ವಾತಾವರಣದಲ್ಲಿ ಜೀವನ ದೂಡುವಂತಾಗಿದೆ.

ಸೋಮವಾರಪೇಟೆ ತಾಲೂಕು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿದೆ. ಮೊದಲೇ ಬರಗಾಲ ಅದರೊಂದಿಗೆ ಸಾರ್ವಜನಿಕರು, ಸಾಕು ಪ್ರಾಣಿಗಳು ನೀರಿಗಾಗಿ ಪರದಾಡುತ್ತಿರುವಾಗ ತೋಡಿಗೆ ಕಾಫಿ ಪಲ್ಪರ್‍ನ ಕೊಳಚೆ ನೀರು ಕುಡಿಯುವ ನೀರಿನ ಬಾವಿಗೆ ಸೇರುವದರಿಂದ ಜನಸಾಮಾನ್ಯರು ಕುಡಿಯಲು ನೀರಿಲ್ಲದೇ ಪರದಾಡು ವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹರದೂರು ಗ್ರಾಮ ಪಂಚಾಯಿತಿಗೆ ಹರದೂರು ಗ್ರಾಮದ ಜಯರಾಮ, ವರಪ್ರಸಾದ, ದೀಪಕ್ ದೂರು ನೀಡಿದ್ದಾರೆ.