ಮಡಿಕೇರಿ, ಫೆ. 27: ಅಧಿಕಾರಿಗಳು ಹಾಗೂ ಬಿಜೆಪಿ ನಾಯಕರ ವರ್ತನೆಯಿಂದ ಮನನೊಂದು ನಾಪೋಕ್ಲು ಕ್ಷೇತ್ರದ ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಯ್ಯ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಜಿ.ಪಂ. ಅಧ್ಯಕ್ಷರ ಮಧ್ಯಪ್ರವೇಶ ಹಾಗೂ ಮನವೊಲಿಕೆಯಿಂದ ಪರಿಸ್ಥಿತಿ ತಣ್ಣಗಾಗಿದೆ.

ತಾವು ಜಿ.ಪಂ. ಸದಸ್ಯರಾಗಿದ್ದರೂ ಯಾವದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು, ಸ್ವತಂತ್ರವಾಗಿ ಕೆಲಸ ಕಾರ್ಯ ನಿರ್ವಹಿಸಲು ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ಪಕ್ಷದಲ್ಲಿ ಗುರುತಿಸಿಕೊಂಡಿರುವ ಮನು ಮಹೇಶ್ ಅವರುಗಳ ಕಿರಿಕಿರಿಯಿಂದಾಗಿ ಸಾಧ್ಯವಾಗುತ್ತಿಲ್ಲ. ಅಲ್ಲದೆ ಗುತ್ತಿಗೆದಾರರು, ಅಭಿಯಂತರರು ಸೇರಿಕೊಂಡು ಕಮೀಷನ್‍ಗಾಗಿ ತನ್ನ ಮೇಲೆ ಪಿತೂರಿ ನಡೆಸುತ್ತಿರುವದು ಗಮನಕ್ಕೆ ಬಂದಿದ್ದು, ಇದರಿಂದ ನೋವಾಗಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವದಾಗಿ ಮುರಳಿ ‘ಶಕ್ತಿ'ಯೊಂದಿಗೆ ಹೇಳಿಕೊಂಡರು. ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದು, ಅಧ್ಯಕ್ಷರು ಹಾಗೂ ಶಾಸಕರು ಸಮಸ್ಯೆಯನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸರಿಯಾಗಬಹುದೆಂದು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ 20 ವರ್ಷಗಳ ಕಾಲ ಉದ್ಯೋಗಿಯಾಗಿದ್ದ ಮುರಳಿ ಅವರು ಇಲಾಖೆ ಹಾಗೂ ಶಾಲೆಗಳಲ್ಲಿ ಉತ್ತಮ ಬಾಂಧವ್ಯದ ಹೆಸರು ಪಡೆದುಕೊಂಡಿದ್ದಾರೆ. ನಿವೃತ್ತಿ ಪಡೆದುಕೊಂಡು ಉದ್ಯಮಿಯಾಗಿರುವ ಇವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು, ಜಿ.ಪಂ. ಸದಸ್ಯರಾಗಿಯೂ ಉತ್ತಮ ಹೆಸರು ಹೊಂದಿದ್ದಾರೆ.