ಸೋಮವಾರಪೇಟೆ, ಫೆ.27: ದೇಶಕ್ಕೆ ಉತ್ತಮ ನಾಗರಿಕರನ್ನು ತಯಾರು ಮಾಡುವ ವಿದ್ಯಾಸಂಸ್ಥೆಗಳು ಬಂಡವಾಳ ಹೂಡಿಕೆಯ ವ್ಯಾಪಾರೀ ಕ್ಷೇತ್ರವಾಗಬಾರದು ಎಂದು ಮಾಜೀ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಭಿಪ್ರಾಯಿಸಿದರು.ಇಲ್ಲಿಗೆ ಸಮೀಪದ ಗೌಡಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಪುರ ಪ್ರವೇಶ ಮತ್ತು ಗುರುವಂದನಾ ಕಾರ್ಯಕ್ರಮ ಹಾಗೂ ಗೌಡಳ್ಳಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಮತ್ತು ದಿವಂಗತ ವಿ.ಟಿ. ಈರಪ್ಪನವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

(ಮೊದಲ ಪುಟದಿಂದ) ಸಂಸ್ಕಾರಯುತ, ಸಂಸ್ಕøತಿಯನ್ನೊಳಗೊಂಡ ಮೌಲ್ಯಯುತ ಶಿಕ್ಷಣವನ್ನು ನೀಡುವದು ಮಠಮಾನ್ಯಗಳಿಂದ ಮಾತ್ರ ಸಾಧ್ಯ. ಮಠಮಾನ್ಯಗಳು ಸಮಾಜಕ್ಕೆ ಶಕ್ತಿಯಾಗಬೇಕೆಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಮಠಮಾನ್ಯಗಳು ಶ್ರಮಿಸುತ್ತಿವೆ ಎಂದು ಸದಾನಂದಗೌಡ ಹೇಳಿದರು.

ನಮ್ಮ ದೇಶದಲ್ಲಿ ಆದರ್ಶಗಳಿಗೆ ಕೊರತೆಯಿಲ್ಲ. ಆದರೆ ಅನುಷ್ಠಾನದ ಕೊರತೆ ಇದೆ. ವಿದ್ಯಾಕ್ಷೇತ್ರದಲ್ಲಿ ಪರಿವರ್ತನೆ ಆಗಬೇಕಾದರೆ ಮನೆಯಿಂದಲೇ ಪ್ರಾರಂಭವಾಗಬೇಕು. ಸುಮಾರು 487 ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ಯುವಕ ಯುವತಿಯರಿಗೆ ವಿದ್ಯಾಭ್ಯಾಸ ನೀಡಿದ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಸಾಧನೆ ಆಪಾರವಾದದ್ದು. ಶಿಕ್ಷಣ ಕ್ಷೇತ್ರ ಎಂದಿಗೂ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಯ ಕ್ಷೇತ್ರ ಆಗಬಾರದು ಎಂದರು. ಮತ್ತೋರ್ವ ಮುಖ್ಯ ಅತಿಥಿ ಮಾಜೀ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದ ಪ್ರಗತಿಯಿಂದ ಮಾತ್ರ ಸಾಮಾಜಿಕ ಪ್ರಗತಿ ಸಾಧ್ಯ. ಎಲ್ಲಾ ಸರಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಇದುವರೆಗಿನ ಸರ್ಕಾರಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವದು ಸುಲಭದ ಮಾತಲ್ಲ. ಯಾವದೇ ಸರಕಾರಗಳು ಕೂಡ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿವೆ ಎಂದು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಯಾವದೇ ನಿರೀಕ್ಷೆಗಳನ್ನು ಆಪೇಕ್ಷಿಸದೇ ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡುವಲ್ಲಿ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಹೆಚ್ಚು ಶ್ರಮಿಸಿದೆ. ಸರ್ಕಾರಗಳು ಮಾಡಬೇಕಾದ ಕಾರ್ಯವನ್ನು ಮಠಮಾನ್ಯಗಳು ಮಾಡುತ್ತಿವೆ. ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಪ್ರತಿಯೋರ್ವ ಮಕ್ಕಳಿಗೂ ಶಿಕ್ಷಣ ಸಂಜೀವಿನಿಯಾಗಬೇಕೆಂದು ಆಶಿಸಿದ ಕುಮಾರಸ್ವಾಮಿ ಅವರು, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ವೃದ್ಧಿಸಬೇಕು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡಳ್ಳಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.ಬಿ. ಭರತ್‍ಕುಮಾರ್ ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗೌಡಳ್ಳಿ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ. ವಿ.ಟಿ. ಈರಪ್ಪ ಅವರ ಪುತ್ಥಳಿಯನ್ನು ಅನಾವರಣ ಮಾಡಲಾಯಿತು.