ಸೋಮವಾರಪೇಟೆ, ಫೆ. 27: ಸಾಮಾಜಿಕ ಉನ್ನತಿಗೆ ಆಧ್ಯಾತ್ಮಿಕತೆ ಯೊಂದಿಗೆ ಆಧುನಿಕ ವಿಜ್ಞಾನವೂ ಅತ್ಯಗತ್ಯವಾಗಿದ್ದು, ನೂತನ ಆವಿಷ್ಕಾರಗಳಿಗೆ ಸಮಾಜ ತೆರೆದು ಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳು ಅಭಿಮತ ವ್ಯಕ್ತಪಡಿಸಿದರು.ಸಮೀಪದ ಗೌಡಳ್ಳಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಮಹಾಸ್ವಾಮೀಜಿಗಳ ಪುರಪ್ರವೇಶ, ಗುರುವಂದನೆ, ಗೌಡಳ್ಳಿ ಶಾಲೆಯ ಸುವರ್ಣ ಮಹೋತ್ಸವ ಮತ್ತು ದಿ. ವಿ.ಟಿ. ಈರಪ್ಪನವರ ಪುತ್ಥಳಿ ಅನಾವರಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

17ನೇ ಶತಮಾನದಲ್ಲಿ ಭಾರತ ವಿಶ್ವಶ್ರೇಷ್ಠವಾಗಿತ್ತು. ನಂತರದ ಶತಮಾನದಲ್ಲಿ ಬದಲಾವಣೆಗೆ ತೆರೆದುಕೊಳ್ಳದೇ ಇದ್ದುದರಿಂದ ಹಿಂದೆಬೀಳಬೇಕಾಯಿತು. ಇದೀಗ ಶಿಕ್ಷಣ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ದೇಶ ಮುಂದುವರೆಯುತ್ತಿದೆ ಎಂದ ಸ್ವಾಮೀಜಿಗಳು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ಗೆ ಒಳಪಟ್ಟ ಗೌಡಳ್ಳಿ ವಿದ್ಯಾಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ವಿಜ್ಞಾನ ಕಾಲೇಜು ಪ್ರಾರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ವಿವೇಕಾನಂದರು ವಿಶ್ವಮಟ್ಟದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಮುಂದಿನ ದಿನಗಳಲ್ಲಿ ವಿಶ್ವಧರ್ಮ ಸಮ್ಮೇಳನ ಏರ್ಪಟ್ಟರೆ ಭಾರತವನ್ನು ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಗಳು ಪ್ರತಿನಿಧಿಸುವಷ್ಟರ ಮಟ್ಟಿಗೆ ಆಧ್ಯಾತ್ಮಿಕ, ವೈಜ್ಞಾನಿಕ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ, ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಸಚಿವ ಸದಾನಂದಗೌಡ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜೆಡಿಎಸ್ ಮುಖಂಡ ಜೀವಿಜಯ, ಮಾಜೀ ಶಾಸಕ ರಾಮಸ್ವಾಮಿ, ಎಸ್.ಜಿ. ಮೇದಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಶೇಖರ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಪಿ. ಚಂದ್ರಕಲಾ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಧರ್ಮಪ್ಪ, ಉದ್ಯಮಿ ಹರಪಳ್ಳಿ ರವೀಂದ್ರ, ಒಕ್ಕಲಿಗ ಬ್ರಿಗೇಡ್‍ನ ರಾಜ್ಯಾಧ್ಯಕ್ಷ

(ಮೊದಲ ಪುಟದಿಂದ) ಗಿರೀಶ್ ಮಲ್ಲಪ್ಪ, ತಾ.ಪಂ. ಸದಸ್ಯೆ ಕುಸುಮಾ, ಗ್ರಾ.ಪಂ. ಅಧ್ಯಕ್ಷ ಧರ್ಮಾಚಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಗೌಡಳ್ಳಿ ಮಾತ್ರವಲ್ಲದೇ ಸೋಮವಾರಪೇಟೆ ತಾಲೂಕು ಸೇರಿದಂತೆ ಸುತ್ತಮುತ್ತಲಿನಿಂದ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ 487ನೇ ವಿದ್ಯಾಸಂಸ್ಥೆಯಾಗಿ ಗೌಡಳ್ಳಿ ವಿದ್ಯಾಸಂಸ್ಥೆಯನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಬೀಟಿಕಟ್ಟೆಯಿಂದ ಗೌಡಳ್ಳಿ ಶಾಲೆಯವರೆಗೆ ಸ್ವಾಮೀಜಿಗಳನ್ನು ಅಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ನೂರಾರು ಮಂದಿ ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಸುಗ್ಗಿಕುಣಿತ, ಕೀಲುಕುದುರೆ, ಕರಗ, ಗರುಡ ಕುಣಿತ, ಮಹಿಷಾಸುರ, ಸೂರ್ಪನಖಿ, ರಾಜಾರಾಣಿ ಬೊಂಬೆಗಳ ಕುಣಿತ, ಚಾಮ ರಾಜನಗರದ ಗೊರವ ಕುಣಿತಗಳು ಮೆರವಣಿಗೆಯ ಅಂದವನ್ನು ಹೆಚ್ಚಿಸಿದ್ದವು.