ಸೋಮವಾರಪೇಟೆ, ಫೆ.27: ಸಮೀಪದ ಗೌಡಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯದ ಈರ್ವರು ಮಾಜೀ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಡಿ.ವಿ. ಸದಾನಂದಗೌಡ ಅವರುಗಳ ನಡುವೆ ರೈತರ ಸಾಲ ಮನ್ನಾ ವಿಚಾರದಲ್ಲಿ ಮಾತಿನ ಜುಗಲ್‍ಬಂದಿ ನಡೆಯಿತು.ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲೇ ಈರ್ವರು ಮಾಜೀ ಮುಖ್ಯಮಂತ್ರಿಗಳು ಪರೋಕ್ಷವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಈರ್ವರು ನಾಯಕರು ತಮ್ಮ ಭಾಷಣದಲ್ಲಿ ರೈತರ ಸಾಲಮನ್ನಾ ವಿಚಾರವನ್ನು ಪ್ರಸ್ತಾಪಿಸದೇ ಮಾತು ಮುಗಿಸಿದ್ದರು.

ಇದು ಕಾರ್ಯಕ್ರಮ ಆಯೋಜಕರ ಗಮನಕ್ಕೆ ಬಂದು, ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಾಗರಾಜು ಅವರು ಮೈಕ್ ಹಿಡಿದು ಸೋಮವಾರಪೇಟೆ ಭಾಗದಲ್ಲಿ ಹೆಚ್ಚಿನವರು ರೈತಾಪಿ ವರ್ಗಕ್ಕೆ ಸೇರಿದವರಾಗಿದ್ದು, ಪ್ರಸಕ್ತ ಸಾಲಿನಲ್ಲಿ ಬರಪೀಡಿತ ತಾಲೂಕೆಂದು ಪರಿಗಣಿಸಲ್ಪಟ್ಟಿದೆ. ವೇದಿಕೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಗಳಿದ್ದು, ಎಲ್ಲಾ ರೀತಿಯ ರಾಜಕೀಯವನ್ನು ಬದಿಗಿಟ್ಟು ರೈತರ ಸಾಲಮನ್ನಾ ಮಾಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ನಾಯಕರುಗಳ ಗಮನ ಸೆಳೆದರು.

ಈ ಸಂದರ್ಭ ಎದ್ದುನಿಂತ ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ‘ಈ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡುವ ಭರವಸೆ ಇಲ್ಲ. ರಾಜ್ಯದ ರೈತರು ಹಾಗೂ ಎಲ್ಲಾ ವರ್ಗದ ಜನರ ಬೇಡಿಕೆ ರೈತರ ಸಾಲಮನ್ನಾ ಆಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನಮ್ಮ ಸರ್ಕಾರವಿದ್ದಾಗ ಸಾಲಮನ್ನಾ ಮಾಡಿದ್ದೆವು. ಮುಂದೆ ನಿಮ್ಮೆಲ್ಲರ ಆಶೀರ್ವಾದದಿಂದ ಅವಕಾಶ ದೊರೆತರೆ ಸಾಲಮನ್ನಾ ಮಾಡುತ್ತೇವೆ. ಅಲ್ಲಿಯವರೆಗೂ ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳ ಬಾರದು. 15 ತಿಂಗಳು ಕಳೆಯಲಿ ನೋಡೋಣ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೈಕಮಾಂಡ್ ಆದೇಶ ಬೇಕು. ನಮಗೆ ಹಾಗಿಲ್ಲ. ಈಗಿನ ಸರ್ಕಾರ 25 ಸಾವಿರದಷ್ಟು ಸಾಲ ಮನ್ನಾ ಮಾಡುವ ಬಗ್ಗೆ ಮಾಹಿತಿಯಿದೆ. ನಾವು ಅಧಿಕಾರಕ್ಕೆ ಬಂದರೆ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ’ ಎಂದು ಚುನಾವಣಾ ಭಾಷಣದಂತೆಯೇ ಭರವಸೆ ನೀಡಿದರು.

ಕುಮಾರಸ್ವಾಮಿ ಅವರು ಮಾತು ಮುಗಿಸುತ್ತಿದ್ದಂತೆ ಎದ್ದುನಿಂತ ಡಿ.ವಿ. ಸದಾನಂದಗೌಡ ಅವರು, ಶೈಕ್ಷಣಿಕ ಸಮಾರಂಭದಲ್ಲಿ ರಾಜಕೀಯದ ಮಾತುಗಳನ್ನು ಆಡುವುದಿಲ್ಲ. ಆದರೂ ರೈತರ ಸಾಲ ಮನ್ನಾ ಬಗ್ಗೆ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ. ಚುನಾವಣೆಗೆ ಮೊದಲು ಎಲ್ಲರೂ ಹೀಗೇ ಹೇಳ್ತಾರೆ, ನಂತರವಷ್ಟೇ ಗೊತ್ತಾಗೋದು. ಈ ಹಿಂದೆ ಕುಮಾರಸ್ವಾಮಿ ಹಾಗೂ ಜಗದೀಶ್ ಶೆಟ್ಟರ್ ಅವರುಗಳು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ (ಯಡಿಯೂರಪ್ಪ)ರೂ ಸಹ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತಾ ಸಾಲಮನ್ನಾ ಆಗಲಿದೆ ಎಂದು ರಾಜಕೀಯದ ಮಾತಿನಲ್ಲೇ ಭರವಸೆ ನೀಡಿದರು.

ಈರ್ವರು ನಾಯಕರ ಮಾತಿನ ನಂತರ ಆಶೀರ್ವಚನಕ್ಕೆ ಅಣಿಯಾದ ನಿರ್ಮಲಾನಂದನಾಥ ಸ್ವಾಮೀಜಿಗಳು, ತಮ್ಮ ಆಶೀರ್ವಚನಕ್ಕೂ ಮುನ್ನ ಈರ್ವರ ಮಾತುಗಳನ್ನು ಪ್ರಸ್ತಾಪಿಸಿದರು. ‘ಅಮೇರಿಕಾದಲ್ಲೂ ಹೀಗೇ ಆಗುತ್ತದೆ. ಎರಡೂ ಕಡೆಯವರಿಗೆ ದೇಶದ ಅಭಿವೃದ್ಧಿ/ಸಮಸ್ಯೆಯ ಬಗ್ಗೆ ವಿಷಯ ನೀಡಿ ತಮ್ಮ ತಮ್ಮ ನಿಲುವು ಮಂಡಿಸಲು ಅವಕಾಶ ನೀಡುತ್ತಾರೆ. ನಂತರವಷ್ಟೇ ಮತದಾನದಲ್ಲಿ ಉತ್ತರ ನೀಡುತ್ತಾರೆ. ಅಂತಹ ಒಂದು ಚುನಾವಣಾ ಪ್ರಕ್ರಿಯೆ ಇಲ್ಲಿಂದ ಆರಂಭವಾಗಿದೆ. ಎಲ್ಲವೂ ಒಳ್ಳೆಯದೇ’ ಎಂದು ಈರ್ವರ ಭರವಸೆಗಳ ಮಾತಿಗೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ನೀಡಿದರು. ಸ್ವಾಮೀಜಿಯ ಮಾತಿಗೆ ವೇದಿಕೆಯಲ್ಲಿದ್ದವರೂ ಸೇರಿದಂತೆ ಕಾರ್ಯಕ್ರಮದಲ್ಲಿದ್ದವರು ಹೌದು ಎಂಬಂತೆ ತಲೆಯಾಡಿಸಿದರು.

- ವಿಜಯ್ ಹಾನಗಲ್