ಬಸ್ ಕಾಲುವೆಗೆ ಬಿದ್ದು 10 ಸಾವು ಕೃಷ್ಣಾ ಜಿಲ್ಲೆ (ಆಂಧ್ರಪ್ರದೇಶ), ಫೆ.28 : ಮಂಗಳವಾರ ಬೆಳಗ್ಗೆ ಖಾಸಗಿ ಬಸ್ಸೊಂದು ಕಾಲುವೆಗೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. 40 ಮಂದಿಗೆ ಗಾಯಗಳಾಗಿದ್ದು, ಹಲವಾರು ಮಂದಿ ಬಸ್ಸಿನ ಅಡಿಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಒಡಿಶಾದ ಭುವನೇಶ್ವರ್ ದಿಂದ ತೆಲಂಗಾಣಕ್ಕೆ ಬರುತ್ತಿದ್ದ ಬಸ್ ಬೆಳಗ್ಗೆ 5.30ಕ್ಕೆ ಕಾಲುವೆಗೆ ಉರುಳಿ ಬಿದ್ದಿದೆ. ಚಾಲಕ ಆದಿ ನಾರಾಯಣ ಬಸ್ ಚಾಲನೆ ಮಾಡುತ್ತಿದ್ದಾಗ ನಿದ್ದೆ ಮಂಪರಿನಲ್ಲಿದ್ದನೆಂದು ಹೇಳಲಾಗುತ್ತಿದೆ. ವಿಜಯವಾಡದಿಂದ 600 ಕಿಮೀ ಕ್ರಮಿಸಿ ಮುಂದಕ್ಕೆ ಬಂದಾಗ ನಿಯಂತ್ರಣ ತಪ್ಪಿದ ಬಸ್ ರಸ್ತೆ ವಿಭಜಕಕ್ಕೆ ಹೋಗಿ ಢಿಕ್ಕಿ ಹೊಡೆದು ಅಲ್ಲಿಂದ ಕಾಲುವೆಗೆ ಬಿದ್ದಿದೆ ಎಂದು ಬಲ್ಲಮೂಲಗಳು ಹೇಳಿವೆ.
ನಿವೃತ್ತ ಐಎಎಸ್ ಅಧಿಕಾರಿ ಬಂಧನ
ಮೊಹಾಲಿ, ಫೆ.28 : ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಮಂದೀಪ್ ಸಿಂಗ್ ಅವರನ್ನು ಮಂಗಳವಾರ ಪಂಜಾಬ್ ಜಾಗೃತ ದಳ ಅಧಿಕಾರಿಗಳು ಬಂಧಿಸಿದ್ದಾರೆ. ಮೂಲಗಳ ಪ್ರಕಾರ, ಜಾಗೃತ ದಳದ ಪೆÇಲೀಸರು ಸಿಂಗ್ ಅವರನ್ನು ಸೋಮವಾರ ಸಂಜೆ ವಿಚಾರಣೆಗಾಗಿ ಠಾಣೆಗೆ ಕರೆದಿದ್ದರು. ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ. ಸಿಂಗ್ ಅವರನ್ನು ಇಂದು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಎಸಿಬಿ ಧಾಳಿ : 1.5 ಕೋಟಿ ಮೌಲ್ಯದ ಸೀರೆಗಳು ವಶ
ಹುಬ್ಬಳ್ಳಿ, ಫೆ.28 : ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಗಾವಿ, ಹುಬ್ಬಳ್ಳಿ ಹಾಗೂ ಚಿತ್ರದುರ್ಗದಲ್ಲಿ ಏಕ ಕಾಲಕ್ಕೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಧಾಳಿ ನಡೆಸಿದ್ದು, ಈ ವೇಳೆ ಹುಬ್ಬಳ್ಳಿಯ ವಿಶ್ವೇಶ್ವರನಗರ ನಿವಾಸಿ, ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ಮನೆಯಲ್ಲಿ 7.50 ಲಕ್ಷ ನಗದು ಹಾಗೂ ಕೋಟ್ಯಾಂತರ ರೂಪಾಯಿ ಮೌಲ್ಯದ ರೇಷ್ಮೆ ಸೀರೆಗಳು ಪತ್ತೆಯಾಗಿವೆ. ಅಧಿಕಾರಿ ಕರಿಯಪ್ಪ ಕರ್ನಲ್ ಅವರ ಪತ್ನಿ ಶಾಂತಾ ಅವರಿಗೆ ರೇಷ್ಮೆ ಸೀರೆಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅವರಲ್ಲಿದ್ದ ಐದು ಸಾವಿರಕ್ಕೂ ಹೆಚ್ಚು ರೇಷ್ಮೆ ಸೀರೆ ಪತ್ತೆಯಾಗಿದ್ದು, ಅವುಗಳ ಮೌಲ್ಯ 1.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ರಾಹುಲ್ ಗಾಂಧಿ ಭೇಟಿ ಸಂದರ್ಭ ಬಾಂಬ್ ಪತ್ತೆ
ಇಂಫಾಲ್, ಫೆ.28 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಣಿಪುರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸುವ ಮುನ್ನ ಇಂಫಾಲ್ನಲ್ಲಿ ಬಾಂಬ್ ಪತ್ತೆಯಾಗಿ ಆತಂಕ ಸೃಷ್ಟಿ ಮಾಡಿದೆ.ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಇಂಫಾಲ್ ಪೂರ್ವ ಜಿಲ್ಲೆಯ ಖೊಂಗಮನ್ ಬಶಿಖೊಂಗ್ ತುರೆಲ್ ಮಪಲ್ ಪ್ರದೇಶದಲ್ಲಿ ಬಾಂಬ್ ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.ರಾಹುಲ್ ಗಾಂಧಿ ಅವರು ರ್ಯಾಲಿ ಉದ್ದೇಶಿಸಿ ಮಾತನಾಡಲಿರುವ ಸ್ಥಳದಿಂದ 6 ಕಿ.ಮೀ ದೂರದಲ್ಲಿ ಈ ಬಾಂಬ್ ಪತ್ತೆಯಾಗಿದೆ.
ಚಲನಚಿತ್ರ ನಿರ್ದೇಶಕ ರಿಷಿ ಬಂಧನ
ಬೆಂಗಳೂರು, ಫೆ.28 : ಸಿನಿಮಾ ಮಾಡೋದಾಗಿ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್ವುಡ್ನ ವಿವಾದಿತ ನಿರ್ದೇಶಕ ರಿಷಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಒನ್ ವೇ ಚಿತ್ರದ ನಿರ್ಮಾಪಕ ದೀಪಕರಿಂದ ನಿರ್ದೇಶಕ ರಿಷಿ 5 ಲಕ್ಷ ರೂಪಾಯಿ ಪಡೆದಿದ್ದರು. ಬಳಿಕ ದೀಪಕ್ ಹಣ ವಾಪಸ್ ಕೇಳಿದಾಗ ಚೆಕ್ ನೀಡಿದ್ದರು. ಆದ್ರೆ ಚೆಕ್ ಬೌನ್ಸ್ ಆಗಿದ್ದರಿಂದ ರಿಷಿ ವಿರುದ್ಧ ನಿರ್ಮಾಪಕ ದೀಪಕ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೆÇಲೀಸರು ನಿರ್ದೇಶಕ ರಿಷಿಯವರನ್ನು ಬಂಧಿಸಿದ್ದಾರೆ.