ಮಡಿಕೇರಿ, ಫೆ. 28 : ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಅನುಷ್ಠಾನ ಹಾಗೂ ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀಕಾಂತರಾಜು ಅವರ ವರದಿಯ ಘೋಷಣೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ)ಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ದಸಂಸ ಕೊಡಗು ಜಿಲ್ಲಾ ಸಮಿತಿ ಸಂಚಾಲಕ ಮೋಹನ್ ಮೂಗನಾಡು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಮಿತಿ ಸಂಚಾಲಕ ಮೋಹನ್ ಮೂಗನಾಡು, ಪರಿಶಿಷ್ಟ ಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ-ಗತಿ ಅರಿಯಲು ಸಂವಿಧಾನ ಬದ್ಧವಾಗಿ ರಚನೆ ಮಾಡಲಾದ ನ್ಯಾ. ಎ.ಜೆ ಸದಾಶಿವ ನೇತೃತ್ವದ ಆಯೋಗದ ವರದಿಯನ್ನು ಜಾರಿಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದ್ದು, ಕೂಡಲೇ ಈ ವರದಿಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅದಿವೇಶನದಲ್ಲಿ ಅಂಗೀಕರಿಸಿ ಸಂವಿಧಾನ ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ರಾಜ್ಯದ 6ಕೋಟಿ ಜನಸಂಖ್ಯೆಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀಕಾಂತರಾಜು ಅವರ ವರದಿಯನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಗಾಯತ್ರಿ ನರಸಿಂಹ, ಎಂ.ಎ ಮನ್ಸೂರ್, ಹೆಚ್.ಜೆ ರಾಚಯ್ಯ, ಲಿಂಗರಾಜು, ಜಿಲ್ಲಾ ಖಚಾಂಚಿ ಗಿರೀಶ್ ಪಗಡಿಗತ್ತಲ, ವೀರಾಜಪೇಟೆ ತಾಲೂಕು ಸಮಿತಿ ಸಂಚಾಲಕ ಹೆಚ್.ಇ ಬಸವರಾಜು, ಸಂಘಟನಾ ಸಂಚಾಲಕರಾದ ಮಹದೇವ, ಅನಿಲ್ ಕುಮಾರ್, ಬಿ.ಎಂ ಭವಿತ್ ಮತ್ತಿತರರು ಭಾಗವಹಿಸಿದ್ದರು.