ಮಡಿಕೇರಿ, ಫೆ. 28: ಮಕ್ಕಳ ಮನಸು ಮೃದು., ನಿಷ್ಕಲ್ಮಶ., ಯಾವದೇ ಬೇಧ-ಭಾವವಿರುವದಿಲ್ಲ ಎಂದು ಹೇಳುತ್ತಾರೆ. ಅಂತೆಯೇ ಮಕ್ಕಳ ಮನಸಿನ ಭಾವನೆಗಳು ಕೂಡ ವಿಭಿನ್ನವಾಗಿರುತ್ತದೆ ಎಂಬದಕ್ಕೆ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪುಟ್ಟ ಕೊಠಡಿ ಸಾಕ್ಷಿಯಾಯಿತು.ಮಕ್ಕಳ ಕೈಚಳಕದಿ ಅರಳಿದ ಚಿತ್ರಕಲೆಗಳು, ಗಾಜಿನ ವರ್ಣ ಚಿತ್ರಗಳು, ಬಗೆ ಬಗೆಯ ಮಾದರಿಗಳು, ಕಲ್ಪನೆಯ ಮೃಗಾಲಯ, ವಾಯು, ಜಲ ಮಾಲಿನ್ಯದ ಬಗೆಗಿನ ಕಾಳಜಿಯ ಮಾದರಿಗಳು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದವು. ಪುಟಾಣಿ ಮಕ್ಕಳ ಯೋಚನಾ ಲಹರಿ ಮೆಚ್ಚುವಂತಿತ್ತು.
ವಿಜ್ಞಾನ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಲಾ ಹಾಗೂ ವಸ್ತು ಪ್ರದರ್ಶನದಲ್ಲಿ ಮಕ್ಕಳೇ ತಯಾರಿಸಿದ ವಿವಿಧ ಮಾದರಿಗಳು ಗಮನ ಸೆಳೆದವು. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರಶ್ನೆಗಳು ಹುಟ್ಟಬೇಕು, ಶಿಕ್ಷಕರಲ್ಲಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು, ಇಂದು ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದ್ದು, ಮಾಹಿತಿ ಸಂಗ್ರಹಿಸುವ ಅವಕಾಶಗಳಿವೆ ಎಂದು ಹೇಳಿದರು.
ವಿದ್ಯಾರ್ಥಿಗಳು ನಿದ್ರೆಯಲ್ಲಿ ಕನಸು ಕಾಣದೆ ಎಚ್ಚರವಿದ್ದುಕೊಂಡು ಸಾಧನೆ ಮಾಡುವದರ ಬಗ್ಗೆ ಕನಸು ಕಾಣಬೇಕು. ಮುಂದೆ ಗುರಿ ಇರಬೇಕು, ಏನಾದರೂ ಆವಿಷ್ಕಾರ, ಸಂಶೋಧನೆ ಮಾಡಬೇಕೆಂದು ಹೇಳಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ್ಷೆ ಯಮುನ, ಶಾಲಾ ಮುಖ್ಯೋಪಾಧ್ಯಾಯ ಶಿವರಾಂ, ಜಿಲ್ಲಾ ವಿಜ್ಞಾನ ಪರಿಷತ್ನ ಉಪಾಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಶಿಕ್ಷಕಿ ವಸಂತಿ ಇದ್ದರು. ವಿಜ್ಞಾನ ಶಿಕ್ಷಕಿ ಪರಿಚನ ತೇಜಸ್ವಿನಿ ನಿರೂಪಿಸಿದರೆ, ಕ್ಯಾಥರಿನ್ ಸ್ವಾಗತಿಸಿದರು. ಸುಂದರಮ್ಮ ದಿನದ ಮಹತ್ವದ ಕುರಿತು ಮಾತನಾಡಿದರು. ದೈಹಿಕ ಶಿಕ್ಷಕ ಸಂದೇಶ್ ವಂದಿಸಿದರು. ನಂತರ ಶಿಕ್ಷಕ ತೆಕ್ಕಡೆ ಕುಮಾರಸ್ವಾಮಿ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಯಿತು.