ಸೋಮವಾರಪೇಟೆ,ಫೆ.27: ದಿಢೀರ್ ಎದುರಾಗುವ ಅಗ್ನಿ ಅವಘಡಗಳನ್ನು ತಡೆಯುವ ಬಗ್ಗೆ ಸೋಮವಾರಪೇಟೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.ಸಮೀಪದ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಏರ್ಪಡಿಸಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ಅಗ್ನಿ ಅವಘಡ ತಡೆಯುವ ಬಗ್ಗೆ ಸೋಮವಾರಪೇಟೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಾದ ಎಎಸ್‍ಐ ಎನ್.ಎ. ಲವ, ಸಿಬ್ಬಂದಿಗಳಾದ ಲಕ್ಷ್ಮಿಕಾಂತ, ಲಕ್ಷ್ಮೀಕುಮಾರ್ ಡಿ. ಆರ್, ಭರತೇಶ್, ಸುನಿಲ್ ಕುಮಾರ್ ಮತ್ತು ಚೇತನ್ ಅವರುಗಳು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾ.ಪಂ. ಮಾಜಿ ಸದಸ್ಯ ಎಚ್.ಆರ್. ಸುರೇಶ್ ಮಾತನಾಡಿ ರಾಷ್ಟ್ರ ನಿರ್ಮಾಣದಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳ ಪಾತ್ರ ಅಪಾರ. ನಿಮ್ಮಲ್ಲಿ ಸೇವಾಮನೋಭಾವ ಬೆಳೆಯಬೇಕು. ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ವಿದ್ಯಾರ್ಥಿ ಗಳಿಂದ ಆಗಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಯಪ್ಪ ಹಾನಗಲ್, ಬಿ.ಟಿ.ಸಿ.ಜಿ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎನ್.ಎನ್. ರಮೇಶ್, ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀಧರ್, ಉಪನ್ಯಾಸಕರಾದ ಶರಣ್ ಹೆಚ್.ಎಸ್ ಉಪಸ್ಥಿತರಿದ್ದರು.