ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ವರ್ಷವಿಡೀ ಕಲಿತದ್ದನ್ನು ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸ್ಮರಣ ಶಕ್ತಿಯಿಂದಲೇ ಉತ್ತರಗಳನ್ನು ಬರೆಯ ಬೇಕಾಗಿರುತ್ತದೆ. ಹೆಚ್ಚಿನ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಒರೆಗೆ ಹಚ್ಚುವದಕ್ಕಿಂತ, ಅವರ ನೆನಪಿನ ಶಕ್ತಿಯನ್ನು ಪರೀಕ್ಷಿಸುವಂತಹ ಪ್ರಶ್ನೆಗಳಿರುತ್ತವೆ. ಆದ್ದರಿಂದ ಪರೀಕ್ಷೆಗಳನ್ನು ಬರೆಯಲು ಸ್ಮರಣ ಶಕ್ತಿ ಕೂಡ ಅತೀ ಮುಖ್ಯ. ಈ ನಿಟ್ಟಿನಲ್ಲಿ ಕೆಳಗಿನ ಪೂರಕ ಅಂಶಗಳನ್ನು ಪಾಲಿಸಿದ್ದಲ್ಲಿ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು.
ಪರೀಕ್ಷೆ ಸಮೀಪಿಸಿದಂತೆ ಆತಂಕ, ಗಾಬರಿ ಉಂಟಾಗುವದು ಸಹಜ. ನಾನು ಚೆನ್ನಾಗಿ ಓದಿದ್ದೇನೆ. ಒಳ್ಳೇ ಅಂಕಗಳನ್ನು ಪಡೆಯುತ್ತೇನೆ ಎಂಬ ಆತ್ಮ ವಿಶ್ವಾಸವಿರಲಿ. ಗಾಬರಿ, ಆತಂಕದಿಂದ ಮರೆವು ಹೆಚ್ಚು. ಜಂಕ್ ಫುಡ್, ಐಸ್‍ಕ್ರೀಮ್, ಕರಿದ ತಿಂಡಿಗಳನ್ನು ತಿನ್ನದೆ ಆದಷ್ಟೂ ಆಹಾರದ ಬಗ್ಗೆ ಜಾಗ್ರತೆ ವಹಿಸಬೇಕು. ತರಕಾರಿಗಳು, ಸೊಪ್ಪುಗಳು, ತಾಜಾ ಹಣ್ಣಿನ ರಸದ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಕಾಫಿ, ಟೀ ಸೇವನೆಗೆ ಮಿತಿಯಿರಬೇಕು. ಅತಿಯಾಗಿ ನಿದ್ರೆ ಕೆಡುವದು ಒಳ್ಳೆಯದಲ್ಲ, ಊಟ, ತಿಂಡಿ, ನಿದ್ರೆಯಲ್ಲಿ ನಿಗದಿತ ಸಮಯ, 6 ರಿಂದ 7 ಗಂಟೆಗಳ ನಿದ್ರೆ ಅವಶ್ಯಕ. ಸ್ಮರಣಶಕ್ತಿ ಹೆಚ್ಚುವದೆಂದು ಮಾತ್ರೆ, ಔಷಧಿ, ಪಾನಿಯಗಳನ್ನು ಖಂಡಿತಾ ಸೇವಿಸದಿರಿ. ದಿನದಲ್ಲಿ 8-10 ನಿಮಿಷಗಳ ಪ್ರಾರ್ಥನೆ, ಧ್ಯಾನ ಹಾಗೂ 15-20 ನಿಮಿಷಗಳ ಯೋಗ, ವ್ಯಾಯಾಮ ಅಥವಾ ಚುರುಕು ನಡಿಗೆ ಇರಲಿ. ಓದು, ಸ್ಮರಿಸು, ಬರಿ, ಪುನಃ ಅಭ್ಯಸಿಸು ಎಂಬ ಸೂತ್ರವನ್ನು ಅಳವಡಿಸಿಕೊಳ್ಳಿ. ಟಿ.ವಿ., ಕಂಪ್ಯೂಟರ್, ಮೊಬೈಲ್ ಬಳಕೆಯಲ್ಲಿ ಹತೋಟಿಯಿರಲಿ. ಕ್ರಿಕೆಟ್ ಪಂದ್ಯಗಳ ವೀಕ್ಷಣೆಯನ್ನು ಪರೀಕ್ಷಾ ಸಂದರ್ಭ ಮೊಟಕುಗೊಳಿಸಿ, ರಾತ್ರೆ ಮಲಗಿದ ಬಳಿಕ ನಿದ್ದೆ ಬರುವಷ್ಟರಲ್ಲಿ ಸಮಯವನ್ನು ನೆನಪಿಸಿಕೊಳ್ಳಲು ಮೀಸಲಿಡಿ. ನಿರಂತರವಾಗಿ ಓದುವ ಬದಲು ಮೆದುಳಿಗೆ ಸ್ವಲ್ಪ ಪದಬಂಧ, ಸುಡೋಕು, ಜಾಣ್ಮೆ ಲೆಕ್ಕಗಳನ್ನು ಬಿಡಿಸಿದರೆ ಬದಲಾವಣೆ ದೊರೆತಂತಾಗಿ, ತಾಜಾತನ ದೊರೆಯುವದು. ಗಲಾಟೆ, ಗದ್ದಲಗಳಿಗಿಂತ ಪ್ರಶಾಂತ, ಆಹ್ಲಾದಕರ ವಾತಾವರಣದಲ್ಲಿ ಓದಿದರೆ, ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವದು. ಬೆಳಗಿನ ಜಾವದ ವ್ಯಾಸಾಂಗ ಅತ್ಯುತ್ತಮ ಫಲ ನೀಡಲಿದೆ. ಓದುವ ಸಮಯದಲ್ಲಿ ಉಂಟಾಗುವ ಅನುಮಾನಗಳು, ಅರ್ಥವಾಗದ ವಿಷಯಗಳು, ಲೆಕ್ಕಗಳನ್ನು ಗುರುತು ಮಾಡಿಟ್ಟುಕೊಂಡು ಉಪನ್ಯಾಸಕ, ಅಧ್ಯಾಪಕರ ಬಳಿ ಚರ್ಚಿಸಿ ಪರಿಹರಿಸಿಕೊಳ್ಳಿ. ನಿಮ್ಮ ಸ್ಮರಣ ಶಕ್ತಿಯ ಬಗ್ಗೆ ವಿಶ್ವಾಸವಿರಲಿ. ಪ್ರತಿದಿನ ನನ್ನ ಸ್ಮರಣ ಶಕ್ತಿ ಹೆಚ್ಚುತ್ತಿದೆ ಎಂಬ ನಂಬಿಕೆ ದೃಢವಾಗಿರಲಿ. ಪ್ರಯತ್ನ, ಪರಿಶ್ರಮವಿದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಪ್ರಯತ್ನದಿಂದ ಯಶಸ್ಸು ಶತಃಸಿದ್ಧ ಅದು ನಿಮ್ಮದಾಗಲಿ.
-ಹರೀಶ್ ಸರಳಾಯ, ಮಡಿಕೇರಿ.