ಮಡಿಕೇರಿ, ಫೆ. 28: ಜಿಲ್ಲೆಯ ಏಕೈಕ ನಗರಸಭೆಯಾದ ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆಯನ್ನು ಅಚ್ಚುಕಟ್ಟುಗೊಳಿಸುವ ನಿಟ್ಟಿನಲ್ಲಿ ಇಡೀ ನಗರದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಈ ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಇಲ್ಲಿ ಮತ್ತೊಂದು ಗಂಭೀರ ವಾದ ವಿಚಾರವಿದ್ದು, ಈ ಬಗ್ಗೆಯೂ ಯಾರೂ ಚಿಂತನೆ ನಡೆಸಿಲ್ಲ. ಒಳಚರಂಡಿ ಯೋಜನೆ ಪರಿಪೂರ್ಣವಾಗಬೇಕಾದರೆ, ಕೊಳಚೆ ನೀರನ್ನು ಶುದ್ಧೀಕರಣಗೊಳಿಸುವ ಘಟಕ ನಿರ್ಮಾಣವಾಗಲೇಬೇಕು. ಈ ಶುದ್ಧೀಕರಣ ಘಟಕ ಸೇರಿದಂತೆ ಯೋಜನೆಗೆ 49.56 ಕೋಟಿ ಮೀಸಲಾಗಿದೆ. ವಿಪರ್ಯಾಸವೆಂದರೆ ಈ ಶುದ್ಧೀಕರಣ ಘಟಕ ಸ್ಥಾಪನೆಗೆ ಪ್ರತ್ಯೇಕ ಟೆಂಡರ್ ಆಗಬೇಕಿದೆ.ಈ ಪ್ರಕ್ರಿಯೆ ನಡೆದು ಮನೆ ಮನೆಯಿಂದ ಒಳಚರಂಡಿ ಪೈಪ್‍ಲೈನ್‍ಗೆ ಸಂಪರ್ಕ ಒದಗಿಸಿ ಯೋಜನೆ ಕಾರ್ಯಗತಗೊಳ್ಳುವದು ಉಳಿದ ಎರಡು ವರ್ಷದ ಅವಧಿಯಲ್ಲಿ ಸಂಶಯವೇ ಆಗಿದೆ. ಕನಿಷ್ಟ ಐದು ವರ್ಷಗಳಾದರೂ ಇದಕ್ಕೆ ಕಾಯಬೇಕಿದೆ.

ಜಾಗವೇ ಅಂತಿಮಗೊಂಡಿಲ್ಲ

ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ನಗರದ ಗಾಲ್ಫ್ ಬಳಿ 4.78 ಎಕರೆ ಜಾಗ ಗುರುತಿಸಲಾಗಿದೆ. ಇದರಲ್ಲಿ 1.70 ಎಕರೆ ಖಾಸಗಿ ಜಾಗವನ್ನು ಭೂಸ್ವಾಧೀನ ಪಡಿಸಿಕೊಂಡಿರುವದು ಹೊರತು ಪಡಿಸಿದರೆ, ಇದರೊಂದಿಗೆ ಗುರುತಿಸಲಾಗಿರುವ ಇನ್ನೂ ಮೂರು ಎಕರೆ ಪೈಸಾರಿ ಜಾಗ ಇನ್ನೂ ನಗರಸಭೆಗೆ ಮಂಜೂರೇ ಆಗಿಲ್ಲ. ಈ ಜಾಗದ ದಾಖಲೆ ಸಂಪೂರ್ಣವಾಗಿ ಸಂಬಂಧಿಸಿದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಪರಿಪೂರ್ಣತೆ ಕಾಣದಂತೆ ಈ ಕಾಮಗಾರಿ ನಡೆಯುತ್ತಿರುವದರಿಂದ ಮಡಿಕೇರಿ ನಗರದ ಸ್ಥಿತಿ ಅಲ್ಲೋಲ - ಕಲ್ಲೋಲವಾಗುತ್ತಿದೆ. ಒಟ್ಟು ಮೂರು ವರ್ಷ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ಯೋಜನೆ ಇದಾಗಿದ್ದು, 112 ಕಿ.ಮೀ. ನಷ್ಟು ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಈ ಕಾಮಗಾರಿಗಾಗಿ ಒಟ್ಟು ರೂ. 49.56 ಕೋಟಿಯನ್ನು ಮೀಸಲಿಡಲಾಗಿದೆ. ರಾಜ್ಯ ಸರಕಾರದ ಜಲಮಂಡಳಿ ಮೂಲಕ ಶೇ. 70 ಹಣಕಾಸು ಸಂಸ್ಥೆ ಮೂಲಕ ಶೇ. 20 ಹಾಗೂ ಸ್ಥಳೀಯ ಸಂಸ್ಥೆಯ ಮೂಲಕ ಶೇ. 10 ರಷ್ಟು ಅನುದಾನ ಭರಿಸಬೇಕಾಗಿದೆ.

(ಮೊದಲ ಪುಟದಿಂದ) ಪ್ರಸ್ತುತ ರೂ. 40.99 ಕೋಟಿ ವೆಚ್ಚದಲ್ಲಿ ಪೈಪ್‍ಲೈನ್, ಪಂಪಿಂಗ್ ಸ್ಟೇಷನ್ (ವೆಟ್‍ಬೆಲ್) ಸೆಫ್ಟಿಕ್ ಟ್ಯಾಂಕ್ ನಿರ್ಮಾಣ ಕಾರ್ಯ ಕಳೆದ ಒಂದು ವರ್ಷದಿಂದ ನಡೆದುಕೊಂಡು ಬರುತ್ತಿದೆ. ಈ ತನಕ 112 ಕಿ.ಮೀ. ಪೈಕಿ 37 ಕಿ.ಮೀ. ನಷ್ಟು ಮಾತ್ರ ಕಾಮಗಾರಿ ನಡೆದಿದೆ. ಅಹಮದಾಬಾದ್‍ನ ಲಕ್ಷ್ಮಿ ಕನ್ಸ್‍ಟ್ರಕ್ಷನ್ಸ್ ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಕಾಮಗಾರಿ ಕೈಗೆತ್ತಿಕೊಂಡಿದೆ.

ಪೈಪ್‍ಲೈನ್ ಅಳವಡಿಕೆ ಸಂದರ್ಭ ತೆಗೆಯುವ ಟ್ರಂಚ್, ಮ್ಯಾನ್ ಹೋಲ್ ಅನ್ನು ರಸ್ತೆ ಅಗೆದ ಬಳಿಕ ಸರಿಪಡಿಸುವದರೊಂದಿಗೆ ಮರು ಡಾಂಬರೀಕರಣವನ್ನೂ ಮಾಡಬೇಕಾಗಿದೆ. ಆದರೆ ನಗರದಲ್ಲಿ ಅಗೆದಿರುವ ರಸ್ತೆಗಳ ನಂತರದ ಪರಿಸ್ಥಿತಿಯನ್ನು ಅವಲೋಕಿಸಿದರೆ, ವಾಹನ ಸಂಚಾರ ಒತ್ತಟ್ಟಿಗಿರಲಿ ಜನರು ನಡೆದಾಡುವದು ಕೂಡ ದುಸ್ತರವೆನಿಸಿದೆ. ದ್ವಿಚಕ್ರ ವಾಹನ ಸವಾರರು ಇಂತಹ ರಸ್ತೆಯಲ್ಲಿ ಬಿದ್ದು ಆಸ್ಪತ್ರೆ ಸೇರಿರುವ ಹಲವು ನಿದರ್ಶನಗಳೂ ಇವೆ. ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದೆ ಕೇವಲ ಕಣ್ಣೊರೆಸುವ ರೀತಿಯಲ್ಲಿ ಮಣ್ಣು ತುಂಬಿ ಮುಚ್ಚಲಾಗಿದೆ. ಇದರಿಂದಾಗಿ ಏರುತಗ್ಗು ಉಂಟಾಗಿದೆ. ನಡು ನಡುವೆ ಮ್ಯಾನ್ ಹೋಲ್ ಇನ್ನಷ್ಟು ಎತ್ತರದಲ್ಲಿದ್ದು, ಎಚ್ಚರ ತಪ್ಪಿದರೆ ಎಡವಿ ಬೀಳುವದು ಗ್ಯಾರಂಟಿ.

ಕುಶಾಲನಗರದಂತಹ ಬಯಲು ಪ್ರದೇಶ ಜಾಗದಲ್ಲಿ 6 ತಿಂಗಳ ಅವಧಿ ಬಳಿಕ ಅಗೆದ ರಸ್ತೆಯನ್ನು ಸರಿಪಡಿಸಲಾಗುತ್ತಿದೆ. ಅಲ್ಲಿ ಬದಲಿ ರಸ್ತೆಗಳಿರುವದರಿಂದ ಹೆಚ್ಚು ಸಮಸ್ಯೆ ಇಲ್ಲ. ಆದರೆ ಮಡಿಕೇರಿಯಲ್ಲಿ ಬದಲಿ ರಸ್ತೆಗಳು ಇಲ್ಲದ ಕಾರಣ ಸಮಸ್ಯೆ ಜಾಸ್ತಿಯಿದೆ. ಒಂದು ತಿಂಗಳ ಅಂತರದಲ್ಲಿ ಅಗೆದ ರಸ್ತೆಯನ್ನು ಸರಿಪಡಿಸಿಕೊಂಡು ಬರಲಾಗುತ್ತಿದೆ ಎಂಬದು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ್ ಅವರ ಸಮಜಾಯಿಸಿಕೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮಣ್ಣು ಕುಸಿಯುತ್ತದೆ. ಇದರಿಂದಾಗಿ ಡಾಂಬರಿಗೂ ಧಕ್ಕೆಯಾಗುತ್ತದೆ. ಆದರೆ ಇಲ್ಲಿನ ವಸ್ತು ಸ್ಥಿತಿಯ ಬಗ್ಗೆ ಸಂಬಂಧಿಸಿದವರಿಗೂ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಏನೋ ಒಂದು ರೀತಿಯಲ್ಲಿ ಕೆಲಸ ನಡೆದುಕೊಂಡು ಹೋಗುತ್ತಿದೆಯೇ ಹೊರತು ಕರಾರುವಕ್ಕಾದ ಕೆಲಸ ಮಾತ್ರ ನಡೆಯುತ್ತಿಲ್ಲ. ಅಚ್ಚರಿ ಎಂದರೆ ಇದನ್ನು ನಗರಸಭೆಯ ಸದಸ್ಯರಾಗಲಿ, ಜನಪ್ರತಿನಿಧಿಗಳಾಗಲಿ ಯಾವ ರೀತಿ ಪ್ರಶ್ನಿಸಿ ವ್ಯವಸ್ಥೆ ಅಚ್ಚುಕುಟ್ಟುಗೊಳ್ಳಸಬೇಕೋ ಅದು ನಡೆಯದಿರುವದು. ಪಾಪದ ಜನರಿಗೆ ಈ ದಿನ ಯಾವ ರಸ್ತೆ ಅಗೆಯುತ್ತಾರೆ. ಯಾವ ರಸ್ತೆ ಸಂಚಾರ ಬಂದ್ ಆಗಿದೆ ಎಂಬ ಕನಿಷ್ಟ ಮಾಹಿತಿಯೂ ಸಿಗುತ್ತಿಲ್ಲ. ಮನೆಯಲ್ಲಿರುವ ವಾಹನಗಳನ್ನು ದಿಢೀರನೆ ರಸ್ತೆ ಅಗೆಯುವದರಿಂದ ಅಗತ್ಯ ಸಂದರ್ಭದಲ್ಲಿ ಹೊರ ತೆಗೆಯಲು ಸಾಧ್ಯವಾಗದೆ ಬಹುತೇಕರು ಪರದಾಡಿದ್ದಾರೆ. ಇನ್ನು ಇದೀಗ ಬೇಸಿಗೆ ಕಾಲವಾಗಿದ್ದು, ಸುಡು ಬಿಸಿಲಿನಿಂದಾಗಿ ಜನರಿಗೆ ನಗರಕ್ಕೆ ಬಂದರೆ ಧೂಳಿನ ಸ್ನಾನ ನಿತ್ಯ ನೂತನವಾಗಿದೆ. ಬೇಸಿಗೆಯಲ್ಲಿ ಈ ಸಮಸ್ಯೆಯನ್ನು ಒಂದಷ್ಟು ಸಹಿಸಿಕೊಲ್ಳಬಹುದೇನೋ. ಆದರೆ ಫೆಬ್ರವರಿ ಮುಗಿಯಿತು. ಇನ್ನು ಮೂರು ತಿಂಗಳಲ್ಲಿ ಬರಲಿದೆ ಮಳೆಗಾಲ. ಈ ಬಾರಿಯ ಮಳೆಗಾಲದಲ್ಲಿ ಮಡಿಕೇರಿ ನಗರ ಹೇಗಿರಬಹುದು ಎಂಬದನ್ನು ಊಹಿಸಿಕೊಂಡರೇ ಈಗಲೇ ನಡುಕವುಂಟಾಗುತ್ತದೆ ಎಂದು ಸಾರ್ವಜನಿಕ ಪ್ರಭುಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ವರ್ಷಗಟ್ಟಲೆ ಅನಿವಾರ್ಯ

ಒಳಚರಂಡಿ ಯೋಜನೆ ಒಟ್ಟು ಮೂರು ವರ್ಷದ ಅವಧಿಯದ್ದು. ಒಂದು ವರ್ಷಕ್ಕೆ ಈ ಸಮಸ್ಯೆ ಇಷ್ಟಿದೆ. ಮಳೆಗಾಲದಲ್ಲಿ ಮತ್ತೆ 6 ತಿಂಗಳು ಕೆಲಸ ಸ್ಥಗಿತವಾಗಿಯೇ ಆಗುತ್ತದೆ. ಆ ಬಳಿಕ ಉಳಿದ ಕಾಮಗಾರಿ ಮುಂದುವರಿಯಬೇಕು, ಪೈಪ್‍ಲೈನ್ ಅಳವಡಿಕೆ ಪೂರ್ಣಗೊಳ್ಳುವವರೆಗೆ ಮನೆ ಮನೆಗಳಿಂದ ಚರಂಡಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆಗಳಿಲ್ಲ. ಎಲ್ಲವೂ ಪೂರ್ಣಗೊಳ್ಳುವವರೆಗೆ ಕಾಯಲೇಬೇಕಾದ ಅನಿವಾರ್ಯತೆ ಇದೆ.