ಮಡಿಕೇರಿ, ಫೆ.28 : ರೈತರು ಉತ್ಪಾದಿಸಿದ ಉತ್ಪನ್ನಗಳಿಗೆ ಆನ್‍ಲೈನ್ ಮೂಲಕ ಮಾರುಕಟ್ಟೆ ಸೌಲಭ್ಯ ಪಡೆಯಲು ಪ್ರತಿಯೊಬ್ಬ ರೈತರೂ ಹೆಸರು ನೋಂದಾಯಿಸಿಕೊಳ್ಳುವಂತೆ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.ಕೃಷಿ ಮಾರಾಟ ಇಲಾಖೆ ಹಾಗೂ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಅಮ್ಮತ್ತಿಯ ಕೊಡವ ಸಮಾಜದಲ್ಲಿ ನಡೆದ ‘ರೈತ ನೋಂದಣಿ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು. (ಮೊದಲ ಪುಟದಿಂದ) ರೈತರು ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆಯನ್ನು ಪಡೆಯಬಹುದಾಗಿದೆ. ನಿಟ್ಟಿನಲ್ಲಿ ಮಾರುಕಟ್ಟೆ ಸೌಲಭ್ಯ ಪಡೆಯಲು ಎಲ್ಲಾ ರೈತರು ಹೆಸರು ನೋಂದಾಯಿಸಿಕೊಳ್ಳುವದು ಅತ್ಯಗತ್ಯವಾಗಿದೆ.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ರೈತರು ಶ್ರಮವಹಿಸಿ ಬೆಳೆದ ಪದಾರ್ಥಗಳಿಗೆ ಬೆಂಬಲ ಬೆಲೆ ದೊರೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೈತರು ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ಅವುಗಳಿಗೆ ಸೂಕ್ತ ಬೆಲೆ ದೊರೆತಾಗ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಂತಾಗುತ್ತದೆ. ಆ ಮೂಲಕ ರೈತರ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿ ಚೆಲುವರಾಯ್ ಅವರು ಮಾತನಾಡಿ ರೈತರು ಹೆಸರು ನೋಂದಾಯಿಸಲು ವಿಳಾಸ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತಿತರ ಮಾಹಿತಿಯನ್ನು ನೀಡಬೇಕಿದೆ ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಡಿ.ಗಣಪತಿ ಅವರ ಹೆಸರು ಪಡೆಯುವ ಮೂಲಕ ರೈತ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಉತ್ಸಾಹಿ ರೈತರಿಗೆ ಇದೇ ಸಂದರ್ಭದಲ್ಲಿ ಸಹಾಯಧನ ನೀಡಲಾಯಿತು. ವೀರಾಜಪೇಟೆ ತಾ.ಪಂ.ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಪಿ.ಸುಬ್ರಮಣಿ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪಾಧ್ಯಕ್ಷ ಕೆ.ಪಿ.ಬಾಲಕೃಷ್ಣ ಹಾಗೂ ರೈತರು ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಶಾಸಕ ಕೆ.ಜಿ. ಬೋಪಯ್ಯ ಅವರು ಕಾವಾಡಿ ಗ್ರಾಮದಲ್ಲಿ ಭದ್ರಕಾಳಿ ದೇವಸ್ಥಾನದ ಹತ್ತಿರ ಕೃಷಿ ಕಣ ಉದ್ಘಾಟಿಸಿದರು. ಸಂಸದ ಸದಸ್ಯ ಪ್ರತಾಪ್ ಸಿಂಹ ಅವರು ಅಮ್ಮತ್ತಿ ಪ್ರೌಢಶಾಲೆ ರಸ್ತೆಯ ಭೂಮಿ ಪೂಜೆ ನೆರವೇರಿಸಿದರು. ಶಾಸಕ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಅಮ್ಮತ್ತಿ ಕೊಡವ ಸಮಾಜದಲ್ಲಿ ತಡೆಗೋಡೆ ಉದ್ಘಾಟಿಸಿದರು.