ಕೂಡಿಗೆ, ಫೆ. 28: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿ 16 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರಾಣದ ತಳಹಂತದ ಕಾಮಗಾರಿಯು ತೀರಾ ಕಳಪೆ ಯಾಗಿದ್ದು, ಈ ವಿಷಯವಾಗಿ ಸ್ಥಳೀಯ ಜಿಲ್ಲಾ ಪಂಚಾಯತ್ ಹಾಗೂ ತಾ.ಪಂ. ಸದಸ್ಯರುಗಳು ಶಾಸಕರ ಗಮನಕ್ಕೆ ತಂದ ಹಿನ್ನೆಲೆ ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಅಪ್ಪಚ್ಚುರಂಜನ್ ಅವರು ನಿರ್ಮಾಣ ಹಂತದಲ್ಲಿರುವ 12 ಕೋಟಿ ಕಾಮಗಾರಿಯನ್ನು ವೀಕ್ಷಿಸಿ ದಂಗಾದರು. ಕ್ಷೇತ್ರದ ಶಾಸಕನಾಗಿರುವ ತನ್ನ ಗಮನಕ್ಕೂ ಬಾರದೆ, ಯಾವದೇ ರೀತಿಯ

(ಮೊದಲ ಪುಟದಿಂದ) ಶಂಕುಸ್ಥಾಪನೆಗಳಾಗದೆ ಈ 12 ಕೋಟಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ನಕ್ಷೆಯು ಇಲ್ಲದೆ, ಅದಕ್ಕೆ ಸಂಬಂಧಪಟ್ಟ ಗುಣಮಟ್ಟ ಪರೀಕ್ಷಿಸುವ ಅಧಿಕಾರಿಯೂ ಸ್ಥಳದಲ್ಲಿ ಇಲ್ಲದೆ ಮನಬಂದಂತೆ ಕಲ್ಲುಪುಡಿಯನ್ನು ಸಿಮೆಂಟ್‍ನೊಂದಿಗೆ ಸೇರಿಸಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮದವರು ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ನೀಡಿರುವದೇನೋ ಸರಿ, ಆದರೂ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆಯೋ ಇಲ್ಲವೋ ಎಂಬ ಬಗ್ಗೆ ಗಮನಿಸಬೇಕು. ಎಂದು ಹೇಳಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ವಿಧಾನಸಭಾ ಅಧಿವೇಶನದ ಕಲಾಪದ ಸಂದರ್ಭ ಚರ್ಚಿಸಿ ಕ್ರಮಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗುವದು. ಪರಿಶೀಲನೆ ನಡೆಸಿದ ಸಂದರ್ಭ ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಎಂಬದು ಗೊತ್ತಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲ್ಮಟ್ಟದಲ್ಲಿ ಚರ್ಚಿಸ ಲಾಗುವದು ಎಂದರು. ಇನ್ನೂ ಎರಡು ದಿನಗಳೊಳಗೆ ಇದಕ್ಕೆ ಸಂಬಂಧÀಪಟ್ಟ ಸೂಕ್ತ ಮಾಹಿತಿಯನ್ನು ಜಿಲ್ಲಾ ಅಥವಾ ರಾಜ್ಯ ಮಟ್ಟದ ಅಧಿಕಾರಿಗಳು ಒದಗಿಸುವಂತೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸೂಚಿಸಿದರು.

ಈ ಸಂದರ್ಭ ಜಿ.ಪಂ ಸದಸ್ಯೆ ಮಂಜುಳಾ, ತಾ.ಪಂ ಸದಸ್ಯ ಗಣೇಶ್, ಆರ್‍ಎಂಸಿ ಮಾಜಿ ಅಧ್ಯಕ್ಷ ಅಧ್ಯಕ್ಷ ಎಂ.ಬಿ.ಜಯಂತ್, ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸದಸ್ಯೆ ಸಾವಿತ್ರಿ, ಜ್ಯೋತಿ, ಕೂಡುಮಂಗಳೂರು ವಲಯ ಬಿಜೆಪಿ ಅಧ್ಯಕ್ಷ ಮಂಜುನಾಥ್, ಕೂಡುಮಂಗಳೂರು ಗ್ರಾ.ಪಂ. ಮಾಜಿ ಸದಸ್ಯೆ ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.