ಸೋಮವಾರಪೇಟೆ, ಮಾ .1: ಕರ್ನಾಟಕದ ಮಣ್ಣಿನ ಏಕೀಕರಣಕ್ಕಿಂತ ಕನ್ನಡ ಮನಸ್ಸುಗಳ ಏಕೀಕರಣ ಇಂದಿನ ಅಗತ್ಯವಾಗಿದೆ ಎಂದು ಇಲ್ಲಿನ ಜಲಾಲೀಯ ಮಸೀದಿಯ ಧರ್ಮಗುರು ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಅಭಿಪ್ರಾಯಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ಇಲ್ಲಿನ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಏಕೀಕರಣದ 60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ನಾಡು, ನುಡಿ ರಕ್ಷಣೆಯ ವಿಚಾರ ಬಂದಾಗ ನಾವು ಜಾತಿ, ಮತ ಭೇದ ಮರೆತು ಹೋರಾಟ ನಡೆಸಿದರೆ ಮಾತ್ರ ಕನ್ನಡ ನಾಡು ಕಟ್ಟಲು ಸಾಧ್ಯ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಘೋಷಣೆ ಆಗಿದೆಯೇ ಹೊರತು ಗಮನಾರ್ಹ ಸಾಧನೆ ಆಗದಿರುವದು ದುರದೃಷ್ಟಕರ. ಇದಕ್ಕೆ ನಮ್ಮನಾಳುವ ಜನಪ್ರತಿನಿಧಿಗಳು ಮತ್ತು ಕನ್ನಡ ಹೋರಾಟಗಾರರ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದರು.

ಕರ್ನಾಟಕ ಏಕೀಕರಣಗೊಂಡು ಹಲವಾರು ವರ್ಷಗಳು ಕಳೆದರೂ ಇಂದಿಗೂ ಕಾಸರಗೋಡು ಮತ್ತು ಬೆಳಗಾವಿ ಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವದು ವಿಪರ್ಯಾಸ.

(ಮೊದಲ ಪುಟದಿಂದ) ಭಾರತದ ಪ್ರಧಾನಮಂತ್ರಿಗಳ ಕನಸಿನ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳ್ಳಬಹುದು. ಆದರೆ ಎಲ್ಲ ಧರ್ಮೀಯರು, ಬೇರೆ ಬೇರೆ ಭಾಷೆಗಳನ್ನಾಡುವ ಅಸಂಖ್ಯಾತ ಜನರಿದ್ದರೂ ಅಚ್ಚ ಕನ್ನಡದ ಭಾಷೆಯ ಬಳಕೆ ಆಗದಿರುವದು ನಮ್ಮ ಭಾಷಾಭಿಮಾನವನ್ನು ಪ್ರಶ್ನೆ ಮಾಡುವಂತಾಗಿದೆ ಎಂದು ವಿಷಾಧಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯ ಉದ್ದೇಶದಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ, ಪೋಷಕರ ಹಾಗೂ ಶಿಕ್ಷಕರ ಸಹಕಾರ ಅತಿ ಮುಖ್ಯ ಎಂದರು.

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ಬಗ್ಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಎಸ್.ಸಿ. ರಾಜಶೇಖರ್ ಮಾತನಾಡಿದರು. ಏಕೀಕರಣದ ನಂತರ ಕೊಡಗು ಜಿಲ್ಲೆಯ ಚಿತ್ರಣದ ಕುರಿತು ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎನ್. ಹರೀಶ್ ಉಪನ್ಯಾಸ ನೀಡಿದರು. ಇದೇ ಸಂದರ್ಭ ಹಿರಿಯ ಸಮಾಜ ಸೇವಕ ಎಸ್.ಪಿ. ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಖಜಾಂಚಿ ಎಸ್.ಎ. ಮುರಳೀಧರ್, ನಿರ್ದೇಶಕ ಕವನ್ ಕಾರ್ಯಪ್ಪ, ಕುವೆಂಪು ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಮಿಲ್ಪ್ರೆಡ್ ಗೊನ್ಸಾಲ್‍ವೆಸ್, ಬಿ.ಟಿ. ಚೆನ್ನಯ್ಯ ಗೌರಮ್ಮ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ. ಬಾಲಕೃಷ್ಣ, ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳಾದ ಎಸ್.ಡಿ. ವಿಜೇತ, ರಾಣಿ ರವೀಂದ್ರ, ಎಸ್.ಎಂ. ಡಿಸಿಲ್ವಾ, ಎಚ್.ಬಿ. ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.