ಮಡಿಕೇರಿ, ಮಾ. 1: ಕೊಡವ ಕುಟುಂಬಗಳ ನಡುವಿನ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಖ್ಯಾತಿ ಪಡೆದಿರುವ ಕೌಟುಂಬಿಕ ಹಾಕಿ ನಮ್ಮೆಗೆ ಇದೀಗ 21ನೇ ವರ್ಷದ ಸಂಭ್ರಮ. 21ನೇ ವರ್ಷದ ಹಾಕಿ ಉತ್ಸವವನ್ನು ನಾಲ್ಕುನಾಡಿನ ಪಟ್ಟಣವಾದ ನಾಪೋಕ್ಲುವಿನಲ್ಲಿ ಬಿದ್ದಾಟಂಡ ಕುಟುಂಬಸ್ಥರು ಆಯೋಜಿಸುತ್ತಿದ್ದಾರೆ. ಬಿದ್ದಾಟಂಡ ಕಪ್ ಹಾಕಿ ನಮ್ಮೆ - 2017ಕ್ಕೆ ಈಗಾಗಲೇ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು, ಸರಕಾರ, ಜಿ.ಪಂ. ಜನಪ್ರತಿನಿಧಿಗಳು ಮತ್ತಿತರರ ಸಹಕಾರದೊಂದಿಗೆ ಪಂದ್ಯಾವಳಿಗಾಗಿ ತಯಾರಿ ನಡೆಯುತ್ತಿದೆ.

ನಗರದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿದ್ದಾಟಂಡ ಕಪ್ ಹಾಕಿ ಉತ್ಸವ ಸಮಿತಿಯ ಪದಾಧಿಕಾರಿಗಳು ಈ ಕುರಿತು ಮಾಹಿತಿಯಿತ್ತರು. ಪಂದ್ಯಾವಳಿ ನಿರ್ದೇಶಕ (ಟೂರ್ನಮೆಂಟ್ ಡೈರೆಕ್ಟರ್)ರಾದ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಗೋಷ್ಠಿಯಲ್ಲಿ ಮಾತನಾಡಿ, ತಂಡಗಳ ನೋಂದಣಿ ಪ್ರಕ್ರಿಯೆ ತಾ. 2 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ. ಇದಕ್ಕಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ 38 ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ ಮೂರು ಮೈದಾನಗಳಲ್ಲಿ ಪಂದ್ಯಾಟ ಜರುಗಲಿದೆ. ಈ ಹಿಂದೆ 2003ರಲ್ಲಿ ನಾಪೋಕ್ಲುವಿನಲ್ಲಿ ಕಲಿಯಂಡ ಕಪ್ ಹಾಕಿ ಉತ್ಸವ ನಡೆದಿದ್ದು, ಆ ಸಂದರ್ಭ ಕುಟುಂಬಸ್ಥರು ಹೊಸ ಮೈದಾನವೊಂದನ್ನು ನಿರ್ಮಿಸಿದ್ದರು. ಇದೀಗ ಈ ಮೈದಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಮತ್ತೊಂದು ಹೊಸ ಮೈದಾನವನ್ನು ನಿರ್ಮಾಣ ಮಾಡಲಾಗುತ್ತಿದೆ. ನಾಪೋಕ್ಲು ವಿಭಾಗದಲ್ಲಿ ಶೀಘ್ರ ಮಳೆಯಾಗುವ ಸಂಭವವಿರುವದರಿಂದ ಪ್ರಾಥಮಿಕ ಶಾಲಾ ಮೈದಾನವನ್ನು ಮೀಸಲು ಮೈದಾನವಾಗಿ ಇಟ್ಟು ಕೊಳ್ಳಲಾಗುವದು ಎಂದು ಅವರು ವಿವರವಿತ್ತರು.

ಸಂಸದ ಪ್ರತಾಪ್ ಸಿಂಹ ಅವರು ಮೈದಾನ ಅಭಿವೃದ್ಧಿ ತಡೆಗೋಡೆ ಇತ್ಯಾದಿಗೆ ರೂ. 20ಲಕ್ಷ ಅನುದಾನ ಒದಗಿಸಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರಳಿ ಅವರು ಮೈದಾನಕ್ಕೆ ರೂ. 2 ಲಕ್ಷ ಹಾಗೂ ತಡೆಗೋಡೆಗೆ ರೂ. 4ಲಕ್ಷ ಒದಗಿಸಲಿ ದ್ದಾರೆಂದರು.

(ಮೊದಲ ಪುಟದಿಂದ) ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ಇತರ ಪ್ರಮುಖರ ಸಹಕಾರದೊಂದಿಗೆ ರಾಜ್ಯ ಸರಕಾರದಿಂದ ರೂ. 40ಲಕ್ಷ ಅನುದಾನ ದೊರೆತಿದೆ ಎಂದೂ ಅವರು ಹರ್ಷ ವ್ಯಕ್ತಪಡಿಸಿದರು.

ಭಾರತ ಹಾಕಿ ತಂಡದ ಆಕರ್ಷಣೆ

ಬಿದ್ದಾಟಂಡ ಕಪ್‍ನ ಉದ್ಘಾ ಟನಾ ಸಮಾರಂಭದ ಸಂದರ್ಭ ಭಾರತ ಹಾಕಿ ತಂಡವೇ ನಾಪೋಕ್ಲು ಮೈದಾನದಲ್ಲಿ ಕಾಣಿಸಿಕೊಳ್ಳಲಿರುವದು ಈ ಬಾರಿಯ ವಿಶೇಷ ಆಕರ್ಷಣೆ ಯಾಗಿದೆ. ಭಾರತ ತಂಡದ ಆಟಗಾರರು ಹಾಗೂ ಪ್ರಸ್ತುತ ಭಾರತ ತಂಡದಲ್ಲಿರುವ ಕೊಡಗಿನ ಆಟಗಾರರು ಹಾಗೂ ಕೊಡಗು ಮೂಲದ ಇತರ ಆಟಗಾರರನ್ನು ಒಳಗೊಂಡ ಕೂರ್ಗ್ ಇಲವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ಆಯೋಜಿಸಲಾಗುತ್ತಿದೆ. ಮಾಜಿ ಅಂತರರಾಷ್ಟ್ರೀಯ ಆಟಗಾರ ಡಾ|| ಎ.ಬಿ. ಸುಬ್ಬಯ್ಯ ಅವರ ಮೂಲಕ ಈ ಪ್ರಯತ್ನ ನಡೆಸಲಾಗಿದೆ. ಹಾಕಿ ಇಂಡಿಯಾದ ಅಧ್ಯಕ್ಷರು, ಇತರ ಪ್ರಮುಖರೊಂದಿಗೆ ಈ ಕುರಿತು ವ್ಯವಹರಿಸಲಾಗಿದ್ದು, ಒಪ್ಪಿಗೆ ದೊರೆತಿದೆ ಎಂದು ತಿಳಿಸಿದ ತಮ್ಮಯ್ಯ ಜಿಲ್ಲೆಯ ಹಾಕಿ ಅಭಿಮಾನಿಗಳಿಗೆ ಇದೊಂದು ಉತ್ತಮ ಅವಕಾಶವಾಗಲಿದೆ ಎಂದರು.

ಉದ್ಘಾಟನಾ ಸಮಾರಂಭಕ್ಕೆ ಭಾರತೀಯ ಸೇನೆಯ ಪ್ರಮುಖರನ್ನು ಕರೆತರಲು ಪ್ರಯತ್ನ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಈ ಸಂದರ್ಭ ಪಾಲ್ಗೊಳ್ಳಲಿದ್ದಾರೆಂದರು.

ಏಪ್ರಿಲ್ 17 ರಿಂದ ಆರಂಭ

ಬಿದ್ದಾಟಂಡ ಹಾಕಿ ನಮ್ಮೆ ಏಪ್ರಿಲ್ 17ರಿಂದ ಆರಂಭಗೊಳ್ಳಲಿದೆ. ಇಲ್ಲಿಂದ ಸುಮಾರು 25 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ನಾಪೋಕ್ಲುವಿನಲ್ಲಿ ಹಾಕಿ ಕಲರವ ಮುದ ನೀಡಲಿದೆ.

ಮುಖ್ಯ ಮೈದಾನದಲ್ಲಿ ಪಂದ್ಯ ವೀಕ್ಷಣೆಗೆ 30 ರಿಂದ 40 ಸಾವಿರ ಜನರಿಗೆ ಸ್ಥಳಾವಕಾಶವಿರುವ ಗ್ಯಾಲರಿ ನಿರ್ಮಾಣ ಮಾಡಲಾಗುವದು, ಈ ಬಾರಿ ವಾಟರ್ ಪ್ರೂಫ್ ಮೇಲ್ಚಾವಣಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಮ್ಮಯ್ಯ ಹೇಳಿದರು.

ಅಗತ್ಯ ವ್ಯವಸ್ಥೆಗಳು

ಪಂದ್ಯಾಟದ ಯಶಸ್ಸಿಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗು ವದು, ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಿಸಲಾಗು ವದು ಇದರೊಂದಿಗೆ ನಾಪೋಕ್ಲು ಕಾವೇರಿ ನದಿ ತೀರದಲ್ಲಿ ಬರಲಿದ್ದು, ಕಾವೇರಿ ನದಿಯ ಸ್ವಚ್ಛತೆ ಕಾಪಾಡುವದು ಹಾಗೂ ನಾಪೋಕ್ಲು ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸು ವದರೊಂದಿಗೆ ಸ್ವಚ್ಛ ಪಟ್ಟಣವಾಗಿ ಉಳಿಸಲು ಕಟಿಬದ್ಧರಾಗುವದಾಗಿ ಹೇಳಿದರು. ಮೈದಾನ ಸಮಿತಿಯ ಅಧ್ಯಕ್ಷ ಬೆಲ್ಲು ಬೆಳ್ಯಪ್ಪ ಅವರು ಮಾತನಾಡಿ, ಹಾಕಿ ಉತ್ಸವದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು. ಗೋಷ್ಠಿಯಲ್ಲಿ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ಟಿ. ಸುಜನ್ ನಂಜಪ್ಪ, ಮೈದಾನ ಸಮಿತಿಯ ಹರ್ಷ ನಾಣಯ್ಯ, ಸಂಪತ್ ಸೋಮಯ್ಯ ಉಪಸ್ಥಿತರಿದ್ದರು.