ಮಡಿಕೇರಿ, ಮಾ.1 : ಜಿ.ಪಂ. ಸದಸ್ಯತ್ವ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿರುವದಾಗಿ ತಿಳಿಸಿರುವ ಜಿ.ಪಂ ಸದಸ್ಯ ಮುರುಳಿ ಕರುಂಬಮ್ಮಯ್ಯ ಜಿಲ್ಲಾ ಬಿಜೆಪಿಯಲ್ಲಿ ಯಾವದೇ ಗೊಂದಲಗಳಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಒಂದು ಕುಟುಂಬವಾಗಿದ್ದು, ಕುಟುಂಬದೊಳಗೆ ಕೆಲವು ಭಿನ್ನಾಭಿಪ್ರಾಯಗಳು ಮೂಡುವದು ಸಹಜವೆಂದು ಸಮರ್ಥಿಸಿಕೊಂಡರು. ಪಕ್ಷದ ಜಿಲ್ಲಾಧ್ಯಕ್ಷ ಮನುಮುತ್ತಪ್ಪ ಅವರ ಮಾತನ್ನು ತಾನು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ತಪ್ಪು ನಡೆದು ಹೋಗಿದ್ದು, ಇದನ್ನು ಸರಿಪಡಿಸಿಕೊಂಡು ಬಿಜೆಪಿಯ ಬಲವರ್ಧನೆಗೆ ಒಗ್ಗಟ್ಟನ್ನು ಪ್ರದರ್ಶಿಸುವದಾಗಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಕೈಬಲ ಪಡಿಸುವದಾಗಿ ತಿಳಿಸಿದ ಅವರು, ಮನುಮುತ್ತಪ್ಪ ಅವರ ವಿರುದ್ಧ ಕಮಿಷನ್ ವಿಚಾರದ ಬಗ್ಗೆ ಹೇಳಿಕೆ ನೀಡಿಲ್ಲವೆಂದು ಸ್ಪಷ್ಟಪಡಿಸಿದರು.
ಬಿಜೆಪಿ ಸಹಕಾರ ಪ್ರಕೋಷ್ಟದ ಅಧ್ಯಕ್ಷ ಮನುಮಹೇಶ್ ಮಾತನಾಡಿ, ಪಕ್ಷದ ಏಳಿಗೆಯನ್ನು ಸಹಿಸದ ಕೆಲವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷವನ್ನು ಹೋಳು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಮನುಮುತ್ತಪ್ಪ ಅವರು ಒಬ್ಬ ಪ್ರಾಮಾಣಿಕ ರಾಜಕಾರಣಿಯಾಗಿದ್ದು, ಅವರ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಲಾಗಿದೆ ಎಂದು ಸಮಜಾಯಿಷಿಕೆ ನೀಡಿದರು.
ನಾಪೋಕ್ಲು ಅಧ್ಯಕ್ಷÀ ಅಂಬಿ ಕಾರ್ಯಪ್ಪ, ಬಲ್ಲಮಾವಟಿ ಸ್ಥಾನೀಯ ಸಮಿತಿ ಅಧ್ಯಕ್ಷÀ ಎಂ.ಎ.ಅಯ್ಯಪ್ಪ, ಹೊದ್ದೂರು ಅಧ್ಯಕ್ಷ ಪೂಣಚ್ಚ ಹಾಗೂ ಪ್ರಮುಖರಾದ ಉತ್ತಯ್ಯ ಮಾತನಾಡಿ ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದು, ಕಹಿ ಮರೆತು ಸಿಹಿಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.