ಶ್ರೀಮಂಗಲ, ಮಾ. 1 : ಗ್ರಾಮೀಣ ಪ್ರದೇಶಗಳಲ್ಲಿ ಶಾಲಾಶುಲ್ಕ ಕಡಿಮೆ ಇರುವದರಿಂದ ಹಾಗೂ ವರ್ಷದಿಂದ ವರ್ಷಕ್ಕೆ ಆರ್.ಟಿ.ಇ. ಅಡಿಯಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚುವದರಿಂದ ಶಾಲೆಗೆ ದೊರಕುವ ಮರುಪಾವತಿ ಮೊತ್ತ ತುಂಬಾ ಕಡಿಮೆಯಾಗುತ್ತದೆ ಹಾಗೂ ಇದರಿಂದ ಶಾಲಾನಿರ್ವಹಣೆಗೆ ತೊಂದರೆಯಾಗುತ್ತದೆ ಎಂದು ಮಡಿಕೇರಿಯಲ್ಲಿ ನಡೆದ ಕೊಡಗು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಸಭೆಯಲ್ಲಿ ಪ್ರಸ್ತಾಪವಾಯಿತು.

ಕೊಡಗು ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೋಳೆರ ಝರು ಗಣಪತಿ ಅವರ ಅಧ್ಯಕ್ಷತೆಯಲ್ಲಿ ಬಾಲಭವನದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಸದಸ್ಯರುಗಳು ಈ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರಕ್ಕೆ ಗಮನ ಸೆಳೆಯಲು ತೀರ್ಮಾನಿಸಿರು.

ಸಂಬಂಧÀಪಟ್ಟ ಅಧಿಕಾರಿಗಳಲ್ಲಿ ಎಲ್ಲಾ ಶಾಲೆಗಳಿಗೂ ಶಾಲಾ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಸರ್ಕಾರವು ನಿಗದಿಪಡಿಸಿದ ಗರಿಷ್ಠ ಮೊತ್ತವನ್ನು ಎಲ್ಲಾ ಶಾಲೆಗಳಿಗೂ ಒಂದೇ ರೀತಿಯಾಗಿ ಮರುಪಾವತಿಸಬೇಕಾಗಿ ಹಾಗೂ ಅದಕ್ಕಾಗಿ ಅಗತ್ಯ ಕ್ರಮಕೈಗೊಳ್ಳಬೇಕಾಗಿ ಸಭೆಯಲ್ಲಿ ಒಕ್ಕೂಟದ ಸದಸ್ಯರು ಸಲಹೆ ನೀಡಿದರು.

ಈ ಸಭೆಯಲ್ಲಿ ಪ್ರಸ್ತುತ ಆರ್.ಟಿ.ಇ ಹಾಗೂ ಶಿಕ್ಷಣ ಇಲಾಖೆಯ ತೊಂದರೆಗಳನ್ನು ಸುದೀರ್ಘ ಚರ್ಚಿಸಲಾಯಿತು. ಸಭೆಯ ನಂತರ ಕೊಡಗು ಜಿಲ್ಲಾ ಡಿ.ಡಿ.ಪಿ.ಐ ಬಸವರಾಜ್ ಅವರನ್ನು ಒಕ್ಕೂಟದ ವತಿಯಿಂದ ಭೇಟಿ ಮಾಡಿ ಆರ್.ಟಿ.ಇ ಯಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ ಗಮನ ಸೆಳೆಯಲಾಯಿತು. ಸಮಸ್ಯೆ ಆಲಿಸಿದ ಡಿ.ಡಿ.ಪಿ.ಐ ಅವರು, ಜಿಲ್ಲೆಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.

ಒಕ್ಕೂಟದ ಉಪಾಧ್ಯಕ್ಷ ದಾಮೋದರ್, ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಹಾಗೂ ಜಿಲ್ಲೆಯ ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡು ತಮ್ಮ ಸಲಹೆ ಸೂಚನೆ ನೀಡಿದರು.