ವೀರಾಜಪೇಟೆ, ಮಾ. 1: ಎಲ್ಲಾ ರೀತಿಯಿಂದಲೂ ಆಧುನಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ಎರಡು ಹೊಸ ಆ್ಯಂಬುಲೆನ್ಸ್ ವಾಹನಗಳನ್ನು ಒದಗಿಸುವಂತೆ ಇಲ್ಲಿನ ಸಾರ್ವಜನಿಕರ ಪರವಾಗಿ ಟಿ.ಎಂ. ಯೋಗೀಶ್ ನಾಯ್ಡು ಹಾಗೂ ಅವರ ತಂಡ ಆಸ್ಪತ್ರೆಯ ಆಡಳಿತ ಹಾಗೂ ಉಸ್ತುವಾರಿ ಸಚಿವರಿಗೆ ತುರ್ತಾಗಿ ಮನವಿ ಸಲ್ಲಿಸಿರುವದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಇಲ್ಲಿನ ಅಂಬಟ್ಟಿ ಬಳಿ ನಡೆದ ಕಾರು-ಬೈಕ್ ಡಿಕ್ಕಿಯಲ್ಲಿ ಕಾಲೇಜು ವಿದ್ಯಾರ್ಥಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ದುರಸ್ತಿಗೊಂಡ ಆ್ಯಂಬುಲೆನ್ಸ್ ವಾಹನದಲ್ಲಿ ಗಾಯಾಳುವನ್ನು ಮಡಿಕೇರಿಗೆ ಸಾಗಿಸುವ ಹಾದಿಯ ಹಾಕತ್ತೂರುವಿನಲ್ಲಿ ವಾಹನ ಕೆಟ್ಟು ನಿಂತಿತು. ಆಸ್ಪತ್ರೆಯ ಇನ್ನೊಂದು ವಾಹನ ಬರುವ ತನಕ ಸುಮಾರು ಒಂದು ಗಂಟೆ ಅವಧಿ ಹಿಡಿದಿದೆ. ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಗಾಯಾಳು ಆಸ್ಪತ್ರೆ ಸೇರಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದನು. ಈಗ ಆಸ್ಪತ್ರೆಯಲ್ಲಿ ಎರಡು ವಾಹನಗಳು ದುಸ್ಥಿತಿಯಲ್ಲಿದ್ದು, ರೋಗಿಗಳ ಸಾಗಾಟಕ್ಕೆ ಯೋಗ್ಯವಾಗಿಲ್ಲ ಎಂದು ದೂರಿದರು.
ಕೂಪದಿರ ಹರೀಶ್ ಮಾತನಾಡಿ, ಜಿಲ್ಲಾಮಟ್ಟದ ಆಸ್ಪತ್ರೆಗೆ ಸಮನಾಗಿರುವ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್ ವಾಹನ ಸೇರಿದಂತೆ ಇತರ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತಾಗಬೇಕು. ಪ್ರಥಮವಾಗಿ ಆಸ್ಪತ್ರೆಗೆ ಎರಡು ಹೊಸ ಆ್ಯಂಬುಲೆನ್ಸ್ ವಾಹನಗಳನ್ನು ಮಂಜೂರು ಮಾಡುವಂತೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಆರೋಗ್ಯ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಕೆ.ಎಸ್. ಮತ್ಯಾಸ್, ಕೆ.ವಿ. ಅಶೋಕ್ ಉಪಸ್ಥಿತರಿದ್ದರು.