ಸೋಮವಾರಪೇಟೆ, ಮಾ. 1: ಕಳೆದ 1966ರಂದು ಪ್ರಾರಂಭವಾದ ಸಮೀಪದ ಅಬ್ಬಿಮಠ ಬಾಚಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಇದುವರೆಗೂ ಸಾವಿರಾರು ಮಂದಿಗೆ ವಿದ್ಯಾದಾನ ಮಾಡಿದ್ದು, ವಿದ್ಯಾರ್ಥಿಗಳ ಕೊರತೆಯಿಂದ ಕಳೆದ ವರ್ಷ ಬಂದ್ ಆಗಿದೆ. ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿದ ಶಿಕ್ಷಕರು ಬೇರೆಡೆಗೆ ವರ್ಗವಾದರೂ ಗ್ರಾಮಸ್ಥರ ಅಭಿಮಾನ ಮಾತ್ರ ಕಡಿಮೆಯಾಗಿರಲಿಲ್ಲ.

ಕಳೆದ 2 ದಶಕಗಳ ಕಾಲ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಈರ್ವರು ಶಿಕ್ಷಕರನ್ನು ಗ್ರಾಮಾಭಿವೃದ್ಧಿ ಸಮಿತಿಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿದ ಸಂದರ್ಭ ಗ್ರಾಮದ ಹಿರಿಯ-ಕಿರಿಯರು ಭಾವುಕರಾದರು. ಸನ್ಮಾನ ಸ್ವೀಕರಿಸಿದ ಶಿಕ್ಷಕರೀರ್ವರು ಗ್ರಾಮಸ್ಥರ ಸಹಕಾರವನ್ನು ನೆನಪಿಸಿಕೊಂಡರು.

ಅಬ್ಬಿಮಠ ಬಾಚಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕಳೆದ 23 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಶಾಲೆ ಮುಚ್ಚಿಹೋಗಿರುವ ಹಿನ್ನೆಲೆ ಬೇರೆಡೆಗೆ ವರ್ಗವಾದ ಶಿಕ್ಷಕ ಹೆಚ್.ಎನ್. ಸದಾನಂದ ಹಾಗೂ ಕಳೆದ 20 ವರ್ಷಗಳ ಕಾಲ ಶಿಕ್ಷಕಿಯಾಗಿದ್ದ ಎಸ್.ಜೆ. ವಾರಿಜಾಮಣಿ ಅವರುಗಳನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಸದಾನಂದ್ ಅವರು, ಗ್ರಾಮದಲ್ಲಿ ಶಾಲೆಯಿದ್ದರೆ ಆ ಗ್ರಾಮಕ್ಕೊಂದು ಶೋಭೆ ಇರುತ್ತದೆ. ವಿದ್ಯಾರ್ಥಿಗಳ ಕೊರತೆಯಿಂದ ಅಬ್ಬಿಮಠ ಬಾಚಳ್ಳಿ ಶಾಲೆ ಮುಚ್ಚಿದ್ದು ಅತ್ಯಂತ ದುಃಖಕರ ಸಂಗತಿ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಂಡರೆ ಪುನಃ ಶಾಲೆ ಪ್ರಾರಂಭವಾಗುತ್ತದೆ. ಈ ಬಗ್ಗೆ ಗ್ರಾಮಸ್ಥರು ಚಿಂತನೆ ನಡೆಸಬೇಕಿದೆ ಎಂದರು.

ಶಿಕ್ಷಕಿ ವಾರಿಜಾಮಣಿ ಮಾತನಾಡಿ, ಸೇವೆಯಲ್ಲಿದ್ದ ಸಂದರ್ಭ ಗ್ರಾಮಸ್ಥರು ನೀಡಿದ ಸಹಕಾರವನ್ನು ಸ್ಮರಿಸಿದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಕೆ. ಮಾಚಯ್ಯ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳಿಗೆ ಶಿಕ್ಷಕರು ಆಗಮಿಸಲು ಹಿಂದೇಟು ಹಾಕುವ ಕಾಲಘಟ್ಟದಲ್ಲಿ ದೂರದೂರಿನಿಂದ ಇಲ್ಲಿಗೆ ಬಂದು ಪಾಠ ಪ್ರವಚನ ಮಾಡಿದ ಶಿಕ್ಷಕರ ಸೇವೆ ಸದಾ ಸ್ಮರಣೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷೆ ಲಲಿತಾ ಜಯರಾಂ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಜ್ಞಾನೇಶ್, ಮಾಜಿ ಎಸ್‍ಡಿಎಂಸಿ ಅಧ್ಯಕ್ಷ ವೇದಮೂರ್ತಿ ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.