ಸುಂಟಿಕೊಪ್ಪ, ಮಾ.1: ಕಾಫಿ ಪಲ್ಪರ್‍ನ ಕೊಳಚೆ ನೀರನ್ನು ತೋಡಿಗೆ ಹರಿಯ ಬಿಡುವದರಿಂದ ರೈತರು ಬಳಸುವ ಕುಡಿಯುವ ನೀರಿನ ಬಾವಿಗೆ ಕೊಳಚೆ ನೀರುವ ಸೇರುತ್ತಿರುವ ಬಗ್ಗೆ ಕಂದಾಯ ಇಲಾಖೆಗೆ ನೀಡಿದ ದೂರಿನನ್ವಯ ಕಂದಾಯ ಪರಿವೀಕ್ಷಕರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾಫಿ ಪಲ್ಪರ್ ಯಂತ್ರಕ್ಕೆ ಬೀಗ ಜಡಿದ ಘಟನೆ ನಡೆದಿದೆ.
ಹರದೂರು ಗ್ರಾಮದ ಬಾಲಪ್ಪನ ಮನೆ ಜಯರಾಂ, ವರಪ್ರಸಾದ್, ದೀಪಕ್ ಹಾಗೂ ಮೇದೂರು ಸುರೇಶ್ ಅವರು ಬಳಸುವ ಕುಡಿಯುವ ನೀರಿನ ಬಾವಿಗೆ ಹರದೂರು ಗ್ರಾಮದ ಪಾಂಡಂಡ ಅಪ್ಪಣ್ಣ ಸುಬ್ಬಯ್ಯ ಅವರ ಕಾಫಿ ತೋಟದಿಂದ ಕಾಫಿ ಪಲ್ಪರ್ ಮಾಡಿದ ಕೊಳಚೆ ನೀರು ಪಲ್ಪರ್ ಗುಂಡಿಯು ತುಂಬಿ ಪಕ್ಕದ ತೋಡಿಗೆ ಹರಿದುಬರುತ್ತಿದೆ ಎಂದು ಹರದೂರು ಗ್ರಾಮ ಪಂಚಾಯಿತಿ, ಸುಂಟಿಕೊಪ್ಪ ನಾಡು ಕಚೇರಿಯ ಕಂದಾಯ ಪರಿವೀಕ್ಷಕರಿಗೆ ಜಯರಾಮ್ ದೂರು ಸಲ್ಲಿಸಿದ್ದರು.
ಈ ಬಗ್ಗೆ ಮಂಗಳವಾರ ಬೆಳಗ್ಗೆ ಸುಂಟಿಕೊಪ್ಪ ನಾಡಕಚೇರಿಯ ಕಂದಾಯ ಪರಿವೀಕ್ಷಕ ಬಿ.ಪಿ.ಕೃಷ್ಣಪ್ಪ, ಗ್ರಾಮ ಲೆಕ್ಕಿಗರಾದ ನಾಗೇಶ್ ರಾವ್, ಕಂದಾಯ ಗ್ರಾಮ ಸೇವಕ ಮಾಂಕು ಅವರು ಪಾಂಡಂಡ ಅಪ್ಪಣ್ಣ ಅವರ ಕಾಫಿ ತೋಟದ ಕಾಫಿ ಪಲ್ಪರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಪಲ್ಪರ್ ಮಾಡಿದ ಕೊಳಚೆ ಹರಿದು ತೋಡಿನ ಮೂಲಕ ಸಾಗಿ ಗ್ರಾಮಸ್ಥರ ಬಾವಿಗೆ ನೇರವಾಗಿ ಸೇರುತ್ತಿರುವ ದೃಶ್ಯ ಕಂಡುಬಂದಈ ಹಿನ್ನೆಲೆಯಲ್ಲಿ ಬೀಗ ಜಡಿದು ಕಂದಾಯ ಪರಿವೀಕ್ಷಕ ಮಾಲೀಕರನ್ನು ಹಾಗೂ ತೋಟದ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಕರೆ ಮಾಡಿ ಕಾಫಿ ಪಲ್ಪರ್ ಕೊಠಡಿಗೆ ಬೀಗ ಜಡಿದಿರುವದಾಗಿ ತಿಳಿಸಿದರಲ್ಲದೇ ಮುಂದೆ ವಾತಾವರಣ ಕಲುಷಿತ ಗೊಳ್ಳದಂತೆ ಕಾಫಿ ಪಲ್ಪರ್ ನೀರನ್ನು ಗುಂಡಿ ತೋಡಿ ಶೇಖರಿಸಲು ಸೂಚಿಸಿದರು.