ಮಡಿಕೇರಿ, ಮಾ. 1: ಕೇರಳದಲ್ಲಿ ಆರ್‍ಎಸ್‍ಎಸ್ ಎಬಿವಿಪಿ, ಬಿಎಂಎಸ್ ಹಾಗೂ ಬಿಜೆಪಿ ಮುಂತಾದ ರಾಷ್ಟ್ರೀಯ ಸಂಘಟನೆಗಳ ಕಾರ್ಯಕರ್ತರನ್ನು ಕಮ್ಯುನಿಷ್ಟರು ಭೀಕರವಾಗಿ ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಮ್ಯುನಿಸ್ಟರು ಮತ್ತು ಅಲ್ಲಿನ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸಂಘಟನೆಯ ನೇತೃತ್ವದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಜಮಾಯಿಸಿ ಕೇರಳ ಸರ್ಕಾರ ಮತ್ತು ಕಮ್ಯುನಿಸ್ಟ್‍ನ ಹಿಂಸಾಕೃತ್ಯ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಆರ್‍ಎಸ್‍ಎಸ್‍ನ ಕೊಡಗು ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, ಕೇರಳದಲ್ಲಿ ಎಲ್‍ಡಿಎಫ್ ಅಧಿಕಾರಕ್ಕೆ ಬಂದಾಗಿನಿಂದ ಹಿಂಸಾಚಾರ ನಿರಂತರವಾಗಿದೆ. ಕಮ್ಯುನಿಷ್ಟರು ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಅವರು ಜೆಎನ್‍ಯು ದೆಹಲಿ ವಿಶ್ವವಿದ್ಯಾನಿಲಯ ಗಳಲ್ಲೂ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ವೈಚಾರಿಕತೆಯ ಸಂಘರ್ಷದ ನಿರ್ಣಾಯಕ ಘಟ್ಟದಲ್ಲಿ ನಾವಿದ್ದು, ಭಾರತವನ್ನು ಜಗದ್ಗುರುವನ್ನಾಗಿಸಲು ಸಮಾಜ ಜಾಗೃತವಾಗಬೇಕಾಗಿದೆ ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೇರಳದಲ್ಲಿ ರಾಷ್ಟ್ರೀಯತೆಯ ಪರ ಮಾತನಾಡುವವರ ವಿರುದ್ಧ ಹಿಂಸಾಚಾರ ಮತ್ತು ಹತ್ಯೆ ಮಾಡಲಾಗುತ್ತಿದೆ. ಕಮ್ಯುನಿಷ್ಟರಿಂದ ದೇಶ ವಿರೋಧಿ ಕೃತ್ಯ ನಡೆಯುತ್ತಿದೆ. ಈ ಬಗ್ಗೆ ಜನತೆ ಸೆಟೆದು ನಿಲ್ಲಬೇಕಾಗಿದೆ ಎಂದು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೇರಳದಲ್ಲಿ ಕಮ್ಯುನಿಷ್ಟರಿಂದ 300ಕ್ಕೂ ಅಧಿಕ ಸಂಘಟನೆಗಳ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಮುಖ್ಯಮಂತ್ರಿ ಪಿಣಾರಾಯಿ ವಿಜಯನ್ ಅವರ ತವರು ಕ್ಷೇತ್ರದಲ್ಲಿಯೇ 3 ಮಂದಿಯ ಹತ್ಯೆ ಹಾಗೂ 100ಕ್ಕೂ ಅಧಿಕ ಗಲಭೆಗಳು ನಡೆದಿವೆ ಎಂದು ಆರೋಪಿಸಿದರು. ಕಮ್ಯುನಿಸ್ಟ್ ಅನ್ನು ಮಟ್ಟ ಹಾಕಲು ಸಮಾಜ ಜಾಗೃತವಾಗಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರಾದ ಕೆ.ಕೆ. ದಿನೇಶ್ ಕುಮಾರ್, ಅರುಣ್ ಕುಮಾರ್, ಮಧುಸೂದನ್, ಡಿ.ಕೆ. ಡಾಲಿ, ಪ್ರಿನ್ಸ್ ಗಣಪತಿ, ತಿಮ್ಮಪ್ಪ, ಮನುಮುತ್ತಪ್ಪ, ರವಿಕುಶಾಲಪ್ಪ, ಪುದಿಯೊಕ್ಕಡ ರಮೇಶ್, ರಾಬಿನ್ ದೇವಯ್ಯ, ಮಲ್ಲಂಡ ಮಧು ದೇವಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಿಜು ಸುಬ್ರಮಣಿ, ಶಶಿ ಸುಬ್ರಮಣಿ, ಐನಂಡ ಜಪ್ಪು ಅಚ್ಚಪ್ಪ, ಮನು ಮಂಜುನಾಥ್, ಉಮೇಶ್, ಸುಬ್ರಮಣಿ, ಪಿ.ಡಿ. ಪೊನ್ನಪ್ಪ, ಧನಂಜಯ, ಟಿ.ಎಸ್. ಪ್ರಕಾಶ್, ಅಜಿತ್ ಕರುಂಬಯ್ಯ, ಕುಮಾರ್, ಗಣೇಶ್, ಬೀನಾ ಬೊಳ್ಳಮ್ಮ ಹಾಗೂ ಇನ್ನಿತರರು ಇದ್ದರು.