*ಸಿದ್ದಾಪುರ, ಮಾ.1: ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ವಿಶೇಷ ಆಸಕ್ತಿ ವಹಿಸಿರುವದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಹೇಳಿದರು. ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೇ ಸಿದ್ದಾಪುರದ ಗೌರಿ ಶಂಕರ ದೇವಸ್ಥಾನದ ಬಳಿಯಿಂದ ಗುಹ್ಯ ಗ್ರಾಮದ ಒಂದನೇ ವಾರ್ಡ್‍ಗೆ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲಾ ಪಂಚಾಯತ್ ಅನುದಾನದಿಂದ 5 ಲಕ್ಷ ಹಾಗೂ ಮಾಜಿ ಎಂಎಲ್‍ಸಿ ಟಿ. ಜಾನ್ ನಿಧಿಯಲ್ಲಿದ್ದ 3ಲಕ್ಷ ರೂಪಾಯಿ ಅನುದಾನದಲ್ಲಿ ಕಾಮಗಾರಿ ಆರಂಭಿಸಿರುವದಾಗಿ ತಿಳಿಸಿದರು.

ಮಾಜಿ ಎಂಎಲ್‍ಸಿ ಟಿ. ಜಾನ್ ಕುಡಿಯುವ ನೀರಿಗೆ ಬಿಡುಗಡೆ ಮಾಡಿದ್ದ 3 ಲಕ್ಷ ಅನುದಾನ ತಾಂತ್ರಿಕ ಕಾರಣಗಳಿಂದ ಬಿಡುಗಡೆಗೊಳ್ಳದೆ ಹಾಗೇ ಉಳಿದಿತ್ತು. ಜಿಲ್ಲಾ ಪಂಚಾಯತ್ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚನವರ ಶ್ರಮದಿಂದ ಹಣ ಬಿಡುಗಡೆಯಾಗಿದ್ದು ಒಟ್ಟು ರೂ. 8 ಲಕ್ಷದಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ.ಮಣಿ ಹೇಳಿದರು.

ನಂತರ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿದ ಸರಿತಾ ಪೂಣಚ್ಚ ಗ್ರಾಮದ ವಿವಿಧ ಅಭಿವೃದ್ಧಿ ವಿಚಾರಗಳ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿದರು. ಈ ಸಂದರ್ಭ ಗ್ರಾಮಾಭಿವೃದ್ಧಿ ಅಧಿಕಾರಿ ವಿಶ್ವನಾಥ್, ಸದಸ್ಯರಾದ ದೇವಜಾನು, ಪ್ರತಿಮಾ ಚಂದ್ರಶೇಖರ್, ಪ್ರೇಮಾ, ಶೈಲಾ, ಪೂವಮ್ಮ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮೂಸಾ ಬ್ಯಾರಿ ಹಾಗೂ ಇತರರು ಉಪಸ್ಥಿತರಿದ್ದರು.