ಮಡಿಕೇರಿ, ಮಾ. 1: ಕಳೆದ ಸೆಪ್ಟೆಂಬರ್ 9ರಂದು ಮಡಿಕೇರಿ ನಗರಸಭೆಯ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಬ್ಬರ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ನಗರಸಭಾ ಸದಸ್ಯರಿಬ್ಬರು ತಮ್ಮ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ನಗರಸಭೆಯ ಮಾಜೀ ಅಧ್ಯಕ್ಷೆಯೂ ಆಗಿರುವ ಸದಸ್ಯೆ ಶ್ರೀಮತಿ ಬಂಗೇರ ಮತ್ತೋರ್ವ ಸದಸ್ಯೆ ವೀಣಾಕ್ಷಿ ಇವರುಗಳ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರು ಇಂದು ಆದೇಶ ಪ್ರಕಟಿಸಿದ್ದಾರೆ.
ಸೆ. 9ರಂದು ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಸಂದರ್ಭ, ಕಾಂಗ್ರೆಸ್ ಪಕ್ಷದಿಂದ ಎಲ್ಲಾ 10 ಮಂದಿ ನಗರಸಭಾ ಸದಸ್ಯರಿಗೆ ಪಕ್ಷಾಧ್ಯಕ್ಷ ಟಿ.ಪಿ. ರಮೇಶ್ ‘ವಿಪ್' ಜಾರಿಗೊಳಿಸಿದ್ದರು. ಈ ಆದೇಶ ಪ್ರತಿಯನ್ನು ಸದಸ್ಯರುಗಳಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಕೂಡ ತಮ್ಮ ಹಸ್ತಾಕ್ಷರದೊಂದಿಗೆ ಪಡೆದುಕೊಂಡಿದ್ದರು.
ಚುನಾವಣಾ ಪ್ರಕ್ರಿಯೆಯೊಂದಿಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳಾಗಿ, ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯೆ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷ
(ಮೊದಲ ಪುಟದಿಂದ) ಸ್ಥಾನಕ್ಕೆ ಪ್ರಕಾಶ್ ಆಚಾರ್ಯ ಅವರುಗಳನ್ನು ಕಣಕ್ಕೆ ಇಳಿಸಿತ್ತು. ಆ ಮೇರೆಗೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಇತ್ತ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಅನಿತಾ ಪೂವಯ್ಯ ಹಾಗೂ ಟಿ.ಎಸ್. ಪ್ರಕಾಶ್ ಇವರುಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ನಗರಸಭೆಯಲ್ಲಿ ಒಟ್ಟು 10 ಸದಸ್ಯರನ್ನು ಒಳಗೊಂಡ ಕಾಂಗ್ರೆಸ್, ವಿಧಾನಸಭಾ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಎಸ್.ಡಿ.ಪಿ.ಐ.ನ ನಾಲ್ವರು ಸದಸ್ಯರ ಬೆಂಬಲದಿಂದ ಈ ಚುನಾವಣೆಯಲ್ಲಿ 15 ಮತ ಗಳಿಕೆಯ ಆಶಯ ಹೊಂದಿತ್ತು.
ಇತ್ತ ಬಿಜೆಪಿ ತನ್ನ 8 ಮಂದಿ ಸದಸ್ಯರೊಂದಿಗೆ ಓರ್ವ ಸಂಸದರು, ಓರ್ವ ಶಾಸಕರು, ವಿಧಾನ ಪರಿಷತ್ತಿನ ಓರ್ವ ಸದಸ್ಯರೊಂದಿಗೆ ಕೇವಲ 11 ಮತಗಳ ಸಂಖ್ಯಾಬಲ ಹೊಂದಿತ್ತು. ಸದಸ್ಯೆ ಸಂಗೀತಾ ಪ್ರಸನ್ನ ಬಿಜೆಪಿ ಬೆಂಬಲಿಸಿದ್ದರಿಂದ ಈ ಸಂಖ್ಯೆ 12ಕ್ಕೆ ಏರಿತ್ತು.
ತಿರುವು ಮುರುವು
ಆದರೆ ಚುನಾವಣಾಧಿಕಾರಿ ಯಾಗಿದ್ದ ಉಪವಿಭಾಗಾಧಿಕಾರಿ ನಂಜುಂಡೇಗೌಡ ಅವರ ಸಮ್ಮುಖ ನಡೆದ ಮತದಾನ ವೇಳೆ ಉಭಯ ರಾಜಕೀಯ ಪಕ್ಷಗಳ ಲೆಕ್ಕಾಚಾರ ತಿರುವು ಮುರುವು ಫಲಿತಾಂಶ ನೀಡುವಂತಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿಗಳ ಪರ ಸದಸ್ಯರು ಕೈ ಎತ್ತುವ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾ ದಿನದವರೆಗೂ ಅಧ್ಯಕ್ಷೆ ಕೂಡ ಆಗಿದ್ದ ಕಾಂಗ್ರೆಸ್‍ನ ಶ್ರೀಮತಿ ಬಂಗೇರ ಮತ್ತು ಇನ್ನೋರ್ವ ಸದಸ್ಯೆ ವೀಣಾಕ್ಷಿ ಇವರುಗಳು ಬಿಜೆಪಿ ಅಭ್ಯರ್ಥಿಗಳ ಪರ ನಿಲುವು ಪ್ರಕಟಿಸಿದ್ದರು.
ಸಂಸದರ ಗೈರು
ಈ ಪ್ರಕ್ರಿಯೆಯಿಂದ ಸಂಸದ ಪ್ರತಾಪ್ ಸಿಂಹ ಅವರು ಗೈರು ಹಾಜರಾಗಿದ್ದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‍ನ ಉಭಯ ಸ್ಥಾನ ಅಭ್ಯರ್ಥಿಗಳಿಗೆ ತಲಾ 13ರಂತೆ ಸಮಬಲದ ಮತಗಳು ಚಲಾಯಿಸಲ್ಪಟ್ಟಿತ್ತು.
ಲಾಟರಿ ಅದೃಷ್ಟ
ಈ ಪರಿಣಾಮವಾಗಿ ಚುನಾವಣಾಧಿಕಾರಿಗಳ ಸಮಕ್ಷಮ ಲಾಟರಿ ಎತ್ತುವದರೊಂದಿಗೆ, ಕಾಂಗ್ರೆಸ್‍ನ ಕಾವೇರಮ್ಮ ಸೋಮಣ್ಣ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಟಿ.ಎಸ್. ಪ್ರಕಾಶ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನ ಆಕಾಂಕ್ಷಿ ಬಿಜೆಪಿಯ ಅನಿತಾ ಪೂವಯ್ಯ ಹಾಗೂ ಕಾಂಗ್ರೆಸ್‍ನ ಉಪಾಧ್ಯಕ್ಷ ಸ್ಥಾನ ಆಕಾಂಕ್ಷಿ ಪ್ರಕಾಶ್ ಆಚಾರ್ಯ ಪರಾಭವಗೊಂಡಿದ್ದರು.
ಪಕ್ಷದಿಂದ ಉಚ್ಚಾಟಿಸಿ ಕ್ರಮ
ಕಾಂಗ್ರೆಸ್ ಈ ಬೆಳವಣಿಗೆಯಿಂದ ಆಕ್ರೋಶಗೊಂಡು ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಇವರುಗಳನ್ನು ಪಕ್ಷದಿಂದ ಉಚ್ಚಾಟಿಸಿದ್ದಲ್ಲದೆ, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದಲ್ಲಿ ಸದಸ್ಯತ್ವ ಅನರ್ಹಗೊಳಿಸಲು ಕೋರಿ ದೂರು ದಾಖಲಿಸಿತ್ತು.
ಕಾಂಗ್ರೆಸ್ ಪರವಾಗಿ ಸರಕಾರಿ ವಕೀಲರಾದ ಎನ್. ಶ್ರೀಧರನ್ ನಾಯರ್ ಅವರು ದಂಡಾಧಿಕಾರಿ ಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರ ಸಮಕ್ಷಮ ವಾದ ಮಂಡಿಸಿದರು.
ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯ್ದೆ 1987ರ ಪ್ರಕರಣ -3 (1) (ಬಿ) ಮತ್ತು 4ರ ಮೇರೆಗೆ ಇಂದು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು, ಪ್ರತಿವಾದಿಗಳಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಇವರುಗಳ ನಗರಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.
ಚುನಾವಣಾ ವೇಳೆ ಪಕ್ಷದ ‘ವಿಪ್' ಉಲ್ಲಂಘನೆ ಚುನಾವಣಾಧಿಕಾರಿಗಳ ಟಿಪ್ಪಣಿ ಹಾಗೂ ಪಕ್ಷ ವಿರೋಧಿ ನಡೆಯನ್ನು ಪ್ರಕರಣದಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ.
ಹೈಕೋರ್ಟ್ ಮೊರೆ ನಿರ್ಧಾರ
ಮಡಿಕೇರಿಯ ವಾರ್ಡ್ ಸಂಖ್ಯೆ (11 ಹಾಗೂ 15ರಲ್ಲಿ ಆಯ್ಕೆಗೊಂಡಿರುವ ಶ್ರೀಮತಿ ಬಂಗೇರ ಮತ್ತು ವೀಣಾಕ್ಷಿ ಇದೀಗ ಜಿಲ್ಲಾ ದಂಡಾಧಿಕಾರಿಗಳ ತೀರ್ಪು ವಿರುದ್ಧ ರಿಟ್ ಅರ್ಜಿ ಮೂಲಕ ಉಚ್ಛ ನ್ಯಾಯಾಲಯದ ಮೊರೆ ಹೋಗುವ ದಾಗಿ ಪ್ರತಿಕ್ರಿಯಿಸಿದ್ದಾರೆ. ಸ್ತ್ರೀಯರ ಬಗ್ಗೆ ಕೆಲವರ ಅಸಡ್ಡೆ ಮತ್ತು ಮಾಜೀ ಅಧ್ಯಕ್ಷರಾಗಿರುವ ಹಾಲೀ ಸದಸ್ಯರೊಬ್ಬರ ದಬ್ಬಾಳಿಕೆಯಿಂದ ತಾವಿಬ್ಬರು ನೋವು ತೋಡಿಕೊಂಡಿ ದ್ದಾರೆ. ಕಾನೂನು ಕಠಿಣವಿದೆ : ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಅವರ ಪ್ರತಿಕ್ರಿಯೆ ಬಯಸಿದಾಗ, ಪಕ್ಷಾಂತರ ನಿಷೇಧ ಕಾನೂನು ಕಠಿಣವಿದ್ದು, ಪ್ರತಿಯೊಬ್ಬ ಜನಪ್ರತಿನಿಧಿ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ನಗರಸಭಾ ಸದಸ್ಯ ಹಾಗೂ ಪಕ್ಷದ ಪ್ರಮುಖ ಕೆ.ಎಂ.ಬಿ. ಗಣೇಶ್ ಪ್ರತಿಕ್ರಿಯಿಸಿ, ‘ಮಾಡಿದ್ದುಣ್ಣೋ ಮಹರಾಯ' ಎಂಬಂತೆ ಈ ತೀರ್ಪು ಎಲ್ಲರಿಗೂ ಪಾಠವೆಂದು ವ್ಯಾಖ್ಯಾನಿಸಿದರು.