ಭಾಗಮಂಡಲ, ಮಾ. 1 : ಭಾಗಮಂಡಲ ಗ್ರಾ. ಪಂ. ಸಾಮಾನ್ಯ ಸಭೆಯು ನಿನ್ನೆ ನಡೆಯಿತು. ಎಲ್ಲಾ ವಿಷಯಗಳು, ಚರ್ಚೆ ಶಾಂತಿಯುತ ವಾಗಿ ನಡೆಯಿತಾದರೂ ಕೊನೆಯಲ್ಲಿ ಪ್ರಸ್ತಾಪಿಸಲಾದ ವಾಹನ ಶುಲ್ಕ ವಸೂಲಾತಿ ಟೆಂಡರ್ ನಡೆಸುವ ವಿಷಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಯವರ ನಡುವೆ ವಾಕ್ಸಮರ ನಡೆಯಿತು. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಂತಹ ಘಟನೆ ನಡೆಯುವದು ಅಪರೂಪ. ವಿವಿಧ ಟೆಂಡರ್‍ಗಳ ಅವಧಿ ಮಾರ್ಚ್ ಕೊನೆಗೆ ಮುಕ್ತಾಯಗೊಳ್ಳುತ್ತಿದ್ದು 2017-18 ರ ಸಾಲಿನ ಟೆಂಡರ್ ಪ್ರಕ್ರಿಯೆ ನಡೆಸಲು ಕಾರ್ಯೋನ್ಮುಖ ರಾಗುವಂತೆ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು. ವಾಹನ ಶುಲ್ಕ ವಸೂಲಾತಿಗೆ ಸಂಬಂಧಿಸಿದ ಟೆಂಡರ್ ಹೊರತು ಪಡಿಸಿ ಉಳಿದೆಲ್ಲ ಟೆಂಡರ್ ನಡೆಸಲು ಪ್ರಕ್ರಿಯೆ ಆರಂಭಿಸಲಾಗುವದು. ವಾಹನ ನಿಲುಗಡೆ ಶುಲ್ಕ ವಸೂಲಾತಿ ಫೆಬ್ರವರಿ 17 ರಂದು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿರುವದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದರು. ಇದರಿಂದ ಆಕ್ರೋಶ ಗೊಂಡ ಆಡಳಿತ ಮಂಡಳಿ ಸದಸ್ಯರು ನಿಲುಗಡೆ ಶುಲ್ಕವನ್ನು ರದ್ದುಗೊಳಿಸು ವಂತೆ ನೀಡಿದ ಆದೇಶ ಅಥವಾ ಜಿಲ್ಲಾಧಿಕಾರಿಗಳ ಸಭೆಯ ನಡಾವಳಿ ಪ್ರತಿಯನ್ನು ಮುಂದಿಡುವಂತೆ ಸೂಚಿಸಿದರು. ಆದರೆ ನಡಾವಳಿ ಇಲ್ಲದ ಕಾರಣ ಪ್ರತಿವರ್ಷ ನಡೆಸುವಂತೆ ಈ ವರ್ಷವೂ ಎಲ್ಲಾ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂಬದಾಗಿ ಪಂಚಾಯಿತಿಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಸದಸ್ಯ ದೇವಂಗೋಡಿ ಭಾಸ್ಕರ್ ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚು ಆದಾಯ ಬರುವದು ವಾಹನ ಶುಲ್ಕದಿಂದ. ಇದರಿಂದಾಗಿ ಭಾಗಮಂಡಲದ ಶುಚಿತ್ವ, ಕುಡಿಯುವ ನೀರು, ಇನ್ನಿತರ ಎಲ್ಲಾ ಮೂಲಭೂತ ಸೌಲಭ್ಯಗಳಿಗೆ ಬಳಸಲಾಗುತ್ತಿದೆ. ಕಳೆದ ಬಾರಿ ಸುಮಾರು 22 ಲಕ್ಷದ 60 ಸಾವಿರಕ್ಕೆ ಟೆಂಡರ್ ನಡೆದಿದ್ದು ಒಂದು ವೇಳೆ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ರದ್ದುಪಡಿಸಲು ಮುಂದಾದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸುವದಾಗಿ ತಿಳಿಸಿದರು. ಇನ್ನೋರ್ವ ಗ್ರಾಮ ಪಂಚಾಯಿತಿ ಸದಸ್ಯ ರಾಜುರೈ ಮಾತನಾಡಿ ಭಾಗಮಂಡಲ ಮತ್ತು ತಲಕಾವೇರಿಗೆ ಶುಚಿತ್ವ ಮತ್ತು ಜಾತ್ರೆಗೆ ಸಂಬಂಧಿಸಿದಂತೆ ಶೌಚಾಲಯ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಪಂಚಾಯಿತಿಯ ಅನುದಾನದಿಂದ ಮಾಡಲಾಗುತ್ತಿದೆ. ಜಾತ್ರೆಗೆ ಸಂಬಂಧಿಸಿದಂತೆ ಪಂಚಾಯಿತಿಗೆ ಹೆಚ್ಚಿನ ಹೊರೆ ಬೀಳುತ್ತದೆ. ಆದರೆ ಜಿಲ್ಲಾಧಿಕಾರಿ ಇದುವರೆಗೆ ಜಾತ್ರೆ ವಿಶೇಷವಾಗಿ ಯಾವದೇ ಅನುದಾನ ನೀಡಿರುವದಿಲ್ಲ ಎಂದು ಹೇಳಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕಾಳನ ರವಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಳೆÉದ ಬಾರಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಾತ್ರೆಗಾಗಿ ವಿಶೇಷ ಅನುದಾನವೆಂದು 10 ಲಕ್ಷ ನೀಡುವದಾಗಿ ಇಬ್ಬರು ಶಾಸಕರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದರು. ಹಿಂದಿನ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಈ ಹಿಂದೆ 25 ಲಕ್ಷ ಕೊಡುವದಾಗಿ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರೂ ಇದುವರೆಗೂ ನೀಡಿಲ್ಲ. ಯಾತ್ರಾ ಸ್ಥಳವಾದ ಈ ಕೇಂದ್ರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು. ಶುಚಿತ್ವದ ಬಗ್ಗೆ ಗ್ರಾಮ ಪಂಚಾಯಿತಿ ಹೆಚ್ಚಿನ ಗಮನ ಕೊಡುತ್ತಿದೆ. ಶುಚಿತ್ವ ಮತ್ತು ಕುಡಿಯುವ ನೀರು ಸೇರಿದಂತೆ ವಿವಿಧ ಕಾರ್ಯಕ್ಕೆ ದೊಡ್ಡ ಮೊತ್ತದ ಹಣ ವೆಚ್ಚವಾಗುತ್ತಿದ್ದು, ವಾಹನ ಟೆಂಡರ್ ತಡೆಹಿಡಿಯಲು ಮುಂದಾದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸುವದಾಗಿ ಹೇಳಿದ್ದಾರೆ.