*ಗೋಣಿಕೊಪ್ಪಲು, ಮಾ. 1: ರೈತರು ಪ್ರಾಥಮಿಕ ಸಹಕಾರ ಸಂಘದ ಸವಲತ್ತುಗಳನ್ನು ಪಡೆದುಕೊಂಡು ಸಂಘದ ಉಳಿವಿಗೆ ಕಾರಣಕರ್ತ ರಾಗಬೇಕು. ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡುವ ವ್ಯವಹಾರದ ಶೇ.60 ರಷ್ಟಾದರೂ ಸಹಕಾರ ಸಂಘದ ಮೂಲಕ ನಡೆಯಲಿ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೂ.60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಗೋದಾಮು ಮತ್ತು ಸಭಾಂಗಣ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಾಥಮಿಕ ಸಹಕಾರ ಸಂಘ ರೈತರ ಅಭಿವೃದ್ಧಿಗೆ ಕೈ ಜೋಡಿಸುತ್ತಿದೆ. ಹಿರಿಯರು ಹಾಕಿಕೊಟ್ಟ ಸಂಘದ ಅಡಿಪಾಯವನ್ನು ಇದೀಗ ಉನ್ನತೀಕರಣಗೊಳಿಸಲಾಗಿದೆ. ಸಂಘದ ಸದಸ್ಯರು ಬ್ಯಾಂಕಿನ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು. ರೈತರು ಸಂಘದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕತೆಯಿಂದ ಮುಂದುವರಿಯ ಬೇಕು. ಸಂಘದ ಚಟುವಟಿಕೆಯಲ್ಲಿ ಪ್ರತಿಯೊಬ್ಬ ಸದಸ್ಯನು ಭಾಗಿಯಾಗಿ ಸಂಘದ ಅಭಿವೃದ್ಧಿಗೆ ಕೈಜೋಡಿಸ ಬೇಕು ಎಂದು ಗೋದಾಮು ಲೋಕಾರ್ಪಣೆ ಗೊಳಿಸಿದ ಅಪೆಕ್ಸ್ ಬ್ಯಾಂಕ್ ಮತ್ತು ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕೊಡಂದೇರ ಬಾಂಡ್ ಗಣಪತಿ ತಿಳಿಸಿದರು.

ಸಹಕಾರ ಸಂಘದ ಉಪನಿಬಂಧಕ ಜಿ.ಆರ್. ವಿಜಯ್ ಕುಮಾರ್ ಮಾತನಾಡಿ, ಸಂಘದ ಚಟುವಟಿಕೆಯಲ್ಲಿ ಪ್ರತಿಯೊಬ್ಬ ಸದಸ್ಯನು ಭಾಗವಹಿಸುವ ಮೂಲಕ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ನಗದು ರಹಿತ ವಹಿವಾಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ಅನುಸರಿಸದೆ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ವ್ಯವಹಾರ ನಡೆಸಬೇಕು ಎಂದರು.

ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ. ಅಪ್ಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಒಗ್ಗಟ್ಟು ಮತ್ತು ಭಾಗವಹಿಸುವಿಕೆಯಿಂದ ಸಂಘ ಅಭಿವೃದ್ಧಿ ಸಾಧ್ಯ ಎಂದರು.

ಸಂಘದ ನಿರ್ಗಮಿತ ಅಧ್ಯಕ್ಷರುಗಳಾದ ಟಿ.ಎಸ್. ಕೃಷ್ಣಮೂರ್ತಿ, ಕಾಳಪಂಡ ಸುದೀರ್, ಚೆಪ್ಪುಡಿರ ಪಿ.ಅಚ್ಚಯ್ಯ, ಕಾಳಪಂಡ ಟಿಪ್ಪು ಬಿದ್ದಪ್ಪ, ಚೆಪ್ಪುಡಿರ ಎಸ್. ತಿಮ್ಮಯ್ಯ, ಶಿವಚಾರರ ಎಸ್. ಸುರೇಶ್ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮಾಜಿ ಎಂ.ಎಲ್.ಸಿ. ಚೆಪ್ಪುಡಿರ ಅರುಣ್ ಮಾಚಯ್ಯ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್, ಮಾಯಮುಡಿ ಗ್ರಾ.ಪಂ. ಅಧ್ಯಕ್ಷೆ ಬಿ.ಎಂ.ಭವಾನಿ, ಸಂಘದ ಉಪಾಧ್ಯಕ್ಷೆ ಪುಚ್ಚಿಮಾಡ ಎಂ.ಶಿಲ್ಪ, ನಿರ್ದೇಶಕರುಗಳಾದ ಕಾಳಪಂಡ ಟಿಪ್ಪು ಬಿದ್ದಪ್ಪ, ಮಲ್ಲೇಂಗಡ ಎಂ. ಪೂಣಚ್ಚ, ನಾಮೇರ ವಿಶ್ವನಾಥ್, ಆಪಟ್ಟೀರ ಎಸ್. ನಾಚಯ್ಯ, ಬಲ್ಯಂಡ ಎಸ್. ಪ್ರತಾಪ್, ಶಿವಚಾರರ ವಿ. ಮಂಜುನಾಥ್, ಬಲ್ಯಂಡ ಪಿ. ದೇವಕ್ಕಿ, ಪಿ. ಚಂದಾ, ಕೆ. ವೈ, ಅಶ್ವಥ್, ಕೊಂಗಂಡ ಎಂ. ಗಣಪತಿ, ಕಾಳಪಂಡ ಸಿ. ನರೇಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಂಗಮ್ಮ ಉಪಸ್ಥಿತರಿದ್ದರು.