ವೀರಾಜಪೇಟೆ, ಮಾ. 1: ಸಮೀಪದ ಕೊಟ್ಟೊಳಿ ಗ್ರಾಮದ ಐತಿಹಾಸಿಕ ಹಿನ್ನಲೆ ಇರುವ ಶ್ರೀಧಾರಾ ಮಹೇಶ್ವರ ದೇವರ ವಾರ್ಷಿಕ ಮಹಾ ಶಿವರಾತ್ರಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ. 20 ರಂದು ದೇವರ ಕಟ್ಟು ಬಿದ್ದು, ತಾ. 23 ರಂದು ಬೆಳಿಗ್ಗೆಯಿಂದ ಪ್ರಾರ್ಥನೆ ಗುರು ಗಣಪತಿ ಪೂಜೆ, ಗಣಪತಿ ಹೋಮ, ಮಹಾಪೂಜೆ ನಡೆಯಿತು. ಸಂಜೆ ಚಂಗಚಂಡ ಕುಟುಂಬಸ್ಥರ ಐನ್‍ಮನೆಯಿಂದ ಭಂಡಾರ ಬಂದ ನಂತರ ತಾ. 24 ರಂದು ಮುಂಜಾನೆ ಇರುಳು ಬೆಳಕು ರುದ್ರಾಭಿಶಷೇಕ, ರುದ್ರಹೋಮ, ಗ್ರಾಮದ ಕೋದಂಡ, ಚಂಗಚಂಡ, ಕೋಣೇರಿರ, ಕುಟ್ಟೇರಿರ ಕುಟುಂಬಸ್ಥರಿಂದ ಎತ್ತು ಪೋರಾಟ ಬಂದ ನಂತರ ಶ್ರೀ ದೇವರ ನೃತ್ಯ ,ಅಲಂಕಾರ ಪೂಜೆ, ಮಹಾಪೂಜೆ ನಡೆಯಿತು. ಊಟೋಪಚಾರದ ನಂತರ ಸಂಜೆ ಉತ್ಸವ ಮೂರ್ತಿಯ ಅವಭ್ರತ ಸ್ನಾನವಾದ ನಂತರ ದೇವಸ್ಥಾನದಲ್ಲಿ ಹನ್ನೊಂದು ಸುತ್ತು ಶ್ರೀ ದೇವರ ನೃತ್ಯವನ್ನು ಭಕ್ತರು ಕಣ್ತುಂಬಿಕೊಂಡರು. ತಾ. 25 ರಂದು ಬೆಳಿಗ್ಗೆ ಕುಟ್ಟಿಚಾತ ತೆರೆ, ಮಧ್ಯಾಹ್ನ ಅಯ್ಯಪ್ಪ ತೆರೆ, ಕ್ಷೇತ್ರಪಾಲ ತೆರೆ, ಮಂತ್ರವಾದಿ ಗುಳಿಗ ತೆರೆಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ತಾ. 26 ರಂದು ನಾಗಪೂಜೆ, ಅಮ್ಮನಿಗೆ ತಾಂಬೀಲ ಬ್ರಹ್ಮರಾಕ್ಷಸ ತಾಂಬೀಲ, ಭೈರವಾದಿ ಪಂಚಮೂರ್ತಿ ಪೂಜೆಗಳು ನಡೆಯಿತು. ನಂತರ ಹಬ್ಬಕ್ಕೆ ತೆರೆಯೆಳೆಯಲಾಯಿತು. ಶ್ರೀ ದೇವರ ಹಬ್ಬವನ್ನು ಗ್ರಾಮದ ಎಲ್ಲಾ ಜನಾಂಗದವರು ಒಟ್ಟಿಗೆ ಸೇರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಅಧ್ಯಕ್ಷ ಕೋದಂಡ ಮುತ್ತಣ್ಣ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಕಾರ್ಯ ನಿರ್ವಹಿಸಿದರು.

- ರೋಷನ್ ತಮ್ಮಯ್ಯ