ಶ್ರೀಮಂಗಲ, ಮಾ. 1: ಸಾರ್ವಜನಿಕರು, ಉದ್ಯಮಿಗಳು, ರೈತ ಸಮುದಾಯ, ಸಂಘ-ಸಂಸ್ಥೆಗಳ ತೀವ್ರ ವಿರೋಧದ ನಡುವೆ ಪ್ರತಿ ಯೂನಿಟ್‍ಗೆ ದರ ರೂ. 1.48 ದರ ಏರಿಕೆ ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಲಾಗಿದೆ. ವಿದ್ಯುತ್ ದರ ಏರಿಕೆ ಸಂಬಂಧ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಅಧ್ಯಕ್ಷತೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕಿರಣ್ ದರ ಏರಿಕೆ ಪ್ರಸ್ತಾವನೆಯನ್ನು ಸಭೆ ಮುಂದೆ ಮಂಡಿಸಿದರು.

ಈ ಪ್ರಸ್ತಾವನೆಯನ್ನು ರಾಜ್ಯದ ಇತರ ಸಂಘ-ಸಂಸ್ಥೆ ಸೇರಿದಂತೆ, ಕೊಡಗು ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ವತಿಯಿಂದ ಸುಮಾರು ಎಂಟು ಜನರು ಆಕ್ಷೇಪಣಾ ಪತ್ರವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಆಕ್ಷೇಪಣಾ ಪತ್ರ ಸಲ್ಲಿಸಿದವರನ್ನು ಆಹ್ವಾನಿಸಿ ಸಭೆಯಲ್ಲಿ ಅವರ ಅಹವಾಲು ಪಡೆಯಲಾಯಿತು.

ಸಭೆಯಲ್ಲಿ ಕೊಡಗು ಜಿಲ್ಲೆಯಿಂದ ಆಕ್ಷೇಪಣೆ ಪತ್ರ ಸಲ್ಲಿಸಿದ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕೊಡಗು ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ, ಕಾಫಿ ರಾಷ್ಟ್ರೀಯ ಪಾನೀಯ ಹೋರಾಟ ಸಂಘದ ಖಜಾಂಚಿ ಮಲ್ಲಮಾಡ ಪ್ರಭು ಪೂಣಚ್ಚ ಹಾಜರಿದ್ದು, ಇದರ ಬಗ್ಗೆ ಆಕ್ಷೇಪಣೆಯನ್ನು ಆಯೋಗದ ಮುಂದೆ ವ್ಯಕ್ತಪಡಿಸಿದರು.

ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ಕೊಡಗಿನಲ್ಲಿ ನಿರಂತರವಾಗಿ ವಿದ್ಯುತ್ ಸಿಗುತ್ತಿಲ್ಲ. ಇದರೊಂದಿಗೆ ಬಹಳ ಹಳೆಯದಾದ ಟ್ರಾನ್ಸ್‍ಫಾರ್ಮರ್ ಇಂದು ಬಳಕೆಯಲ್ಲಿದ್ದು, ಇದರಿಂದ ಸಾಕಷ್ಟು ವಿದ್ಯುತ್ ಸೋರಿಕೆಯಾಗುತ್ತಿದೆ. ಮಳೆಗಾಲದಲ್ಲಿ ಜಂಗಲ್ ಕಟ್ಟಿಂಗ್ ಮಾಡದೆ ವಿದ್ಯುತ್ ಪೆÇೀಲು ಆಗುತ್ತಿದೆ. ಸಾಕಷ್ಟು ಕಡೆಗಳಲ್ಲಿ ಪ್ಯೂಜ್ ಹಾಳಾಗಿದ್ದು, ಅಡಚಣೆಗಳು ಉಂಟಾದರೆ, ತನ್ನಿಂದ ತಾನೆ ಸಂಪರ್ಕ ಕಡಿತವಾಗದೆ, ಇದರಿಂದ ಸಾಕಷ್ಟು ಕಡೆಗಳಲ್ಲಿ ಜನರ ಪ್ರಾಣಗಳಿಗೆ ತೊಂದರೆಯಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಹಾಗೆ ಉಳಿಸಿಕೊಂಡು ಏಕಾಏಕಿ ವಿದ್ಯುತ್ ದರವನ್ನು ಏರಿಸುತ್ತ್ತಿರುವದು ಸಮಂಜಸವಾದ ಕ್ರಮ ಅಲ್ಲ ಎಂದು ಆಕ್ಷೇಪÀ ವ್ಯಕ್ತಪಡಿಸಿದರು. ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಇಂದು ಕೊಡಗು ಜಿಲ್ಲೆಯಲ್ಲಿ ಬರಗಾಲದಿಂದ ಜನರು ತೊಂದರೆ ಅನುಭವಿಸುತ್ತಿದ್ದು. ಜನರು ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಇದರೊಂದಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡಿದರೆ ಜನರನ್ನು ಮತ್ತಷ್ಟು ತೊಂದರೆಗೆ ಒಳಪಡಿಸಿದಂತಾಗುತ್ತದೆ. ಈ ಹಿಂದೆ ಕೊಡಗಿನ ಮೂಲಕ ಕೇರಳಕ್ಕೆ ಹೈಟೆನ್ಷನ್ ವಿದ್ಯುತ್ ಮಾರ್ಗ ಅಳವಡಿಸುವಾಗ ಸರಿಸುಮಾರು ಎಂಬತ್ತು ಸಾವಿರಕ್ಕೂ ಹೆಚ್ಚಿನ ಬೃಹತ್ ಮರಗಳು ಹನನವಾಯಿತು. ಕೊಡಗಿನ ಜೀವಜಲ ಹಾಗೂ ಪ್ರಕೃತಿಯ ಮೇಲೆ ಕೆಲವು ರಾಜಕೀಯ ಮುಖಂಡರ ಬೆಂಬಲದಿಂದ ದಬ್ಬಾಳಿಕೆ ನಡೆಸಲಾಗಿದ್ದು, ಕಾವೇರಿ ಕಣಿವೆಯ ಜನರು ಮತ್ತು ಕಾವೇರಿ ನದಿಯ ನೀರನ್ನು ನೇರವಾಗಿ ನಂಬಿ ಬದುಕುತ್ತಿರುವ ಸಾವಿರಾರು ರೈತರಿಗೆ ಮತ್ತು ನಗರವಾಸಿಗಳಿಗೆ ತೊಂದರೆಯಾಗಿದೆ. ಈ ವಿದ್ಯುತ್ ಮಾರ್ಗದಿಂದ ಇದನ್ನು ಬೆಂಬಲಿಸಿದವರಿಗೆ ಸಾಕಷ್ಟು ಅನುಕೂಲಗಳಾಗಿರಬಹುದು.

ಆದರೆ ಕೊಡಗಿನ ಜನತೆ ಮತ್ತು ರೈತರಿಗೆ ಯಾವದೇ ಪ್ರಯೋಜನವಾಗಿಲ್ಲ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿದ್ದ ಪವರ್‍ಗ್ರಿಡ್ ಸಂಸ್ಥೆಯವರು ಈ ಹಿಂದೆ ಭರವಸೆ ನೀಡಿದಂತೆ ಕೊಡಗಿಗೆ ತಡೆರಹಿತ 24 ಗಂಟೆ ವಿದ್ಯುತ್ ನೀಡುವ ನಿಟ್ಟಿನಲ್ಲಿ ಆಯೋಗ ನಿರ್ದೇಶನ ನೀಡುವಂತೆ ಕೇಳಿಕೊಂಡರು.

ಇಂದು ದೇಶದಲ್ಲೇ ಉತ್ತಮ ವಾಗಿ ತಡೆರಹಿತ ವಿದ್ಯುತ್‍ನ್ನು ಗುಜರಾತ್ ಸರ್ಕಾರ ನೀಡುತ್ತಿದ್ದು, ರಾಜ್ಯ ಸರ್ಕಾರ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕು ಮತ್ತು ರೈತರ ಪಂಪ್‍ಸೆಟ್‍ಗಳಿಗೆ, ಗ್ರಾಹಕರಿಗೆ ನಿರಂತರ ವಿದ್ಯುತ್ ಸಿಗುವಂತಾಗ ಬೇಕು. ತದನಂತರ ದರ ಪರಿಷ್ಕರಣೆಯ ಬಗ್ಗೆ ಚಿಂತಿಸಲಿ ಎಂದು ರವೀಂದ್ರ ಆಕ್ಷೇಪಣೆಯನ್ನು ಮಂಡಿಸಿದರು.

ಕಾಫಿ ರಾಷ್ಟ್ರೀಯ ಪಾನೀಯದ ಖಜಾಂಚಿ ಮಲ್ಲಮಾಡ ಪ್ರಭು ಪೂಣಚ್ಚ ಮಾತನಾಡಿ, ಸರಕಾರದ ವತಿಯಿಂದ ದಕ್ಷಿಣ ಕೊಡಗಿನ ಪೆÇನ್ನಂಪೇಟೆ, ಬಾಳೆಲೆ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಬಿರುನಾಣಿ ಮುಂತಾದ ಭಾಗಗಳಿಗೆ ತಡೆರಹಿತ ವಿದ್ಯುತ್ ನೀಡುವ ಸಲುವಾಗಿ ಮೂರು ಫೀಡರ್‍ಗಳ ನಿರ್ಮಾಣವನ್ನು ಶ್ರೀಘ್ರವೇ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ದಿನದ 24 ಗಂಟೆಯೂ ತಡೆರಹಿತವಾಗಿ ನೀಡಬೇಕು. ಬಹಳಷ್ಟು ಹಳೆಯದಾಗಿರುವ ಮತ್ತು ಜೋತು ಬಿದ್ದಿರುವ ವಿದ್ಯುತ್ ಮಾರ್ಗದ ತಂತಿಗಳನ್ನು ಸರಿಪಡಿಸಬೇಕು. ಇವುಗಳ ಸುಧಾರಣೆ ಮಾಡಿ, ಗುಣಮಟ್ಟದ ವಿದ್ಯುತ್ ನೀಡಲು ಮುಂದಾಗಬೇಕು. ಅದು ಬಿಟ್ಟು ವಿದ್ಯುತ್ ದರ ಏರಿಕೆ ಸರಿಯಲ್ಲ ಎಂದರು.

ಎಲ್ಲರ ಅಹವಾಲನ್ನು ಪರಿಶೀಲಿಸಿದ ನಂತರ ದರ ಏರಿಕೆಯ ಬಗ್ಗೆ ನಿರ್ಣಯ ಕೈಗೊಳ್ಳುವ ಬಗ್ಗೆ ನಿರ್ಧರಿಸ ಲಾಗುವದು ಎಂದು ಆಯೋಗದ ಅಧ್ಯಕ್ಷ ಶಂಕರಲಿಂಗೇ ಗೌಡ ತಿಳಿಸಿದರು. ಇದರೊಂದಿಗೆ ಪ್ರತಿ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ನಡೆಸಿ ಮಾಹಿತಿ ಕಲೆ ಹಾಕುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಆಯೋಗದ ಸದಸ್ಯ ಹೆಚ್.ಡಿ. ಅರುಣ್ ಕುಮಾರ್, ಡಿ.ಬಿ. ಮಣಿವೇಲು ರಾಜು ಉಪಸ್ಥಿತರಿದ್ದರು. ಕೊಡಗು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಯ ಗ್ರಾಹಕರು, ರೈತರು, ಉದ್ಯಮಿಗಳು ಹಾಗೂ ಆಕ್ಷೇಪಣೆ ಸಲ್ಲಿಸಿರುವ ಅರ್ಜಿದಾರರು ಹಾಜರಿದ್ದರು.