ಪೊನ್ನಂಪೇಟೆ, ಮಾ. 1: ಸಮೀಪದ ತೂಚಮಕೇರಿ ಗ್ರಾಮದಲ್ಲಿರುವ ಶ್ರೀ ಮಹಾದೇವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ತಾ. 4 ರಿಂದ 6 ರವರೆಗೆ ವಿವಿಧ ದೇವತಾ ಕಾರ್ಯಗಳೊಂದಿಗೆ ಜರುಗಲಿದೆ.

ತಾ. 4 ರಂದು ಬೆಳಿಗ್ಗೆ ತಂತ್ರಿ ಪರಿಗ್ರಹ, ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹ ವಾಚನ, ದೇವನಾಂದಿ, ಉಗ್ರಾಣ ಮೂಹೂರ್ತ, ಧ್ವಜಾರೋಹÀಣ, ಗಣಪತಿ ಹೋಮ, ಅಂಕುರಾರ್ಪಣೆ, ದಿಕ್ಪಾಲಕ ಪ್ರತಿಷ್ಠೆ, ಬಲಿಕಲ್ಲು ಪ್ರತಿಷ್ಠೆ ನಡೆಯಲಿದೆ. ಅದೇ ದಿನ ಸಂಜೆ ಸಪ್ತಶುದ್ದಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿದಾನ, ಪ್ರಕಾರ ಬಲಿದಾನ, ಬಿಂಬಿ ಶುದ್ದಿ, ಬಿಂಬ ಜಲಾಧಿವಾಸ, ಬಿಂಬ ಧಾನ್ಯಧಿವಾಸ, ಗಣಪತಿ ಸುಬ್ರಮಣ್ಯ ಮತ್ತು ನಾಗಬಿಂಬ ಶಯ್ಯಾಧಿವಾಸ ಕಾರ್ಯಕ್ರಮ ಜರುಗಲಿದೆ.

ತಾ. 5 ರಂದು ಬೆಳಿಗ್ಗೆ ಪಂಚಗವ್ಯ ಪುಣ್ಯಾಹ, ಗಣಪತಿ ಪ್ರತಿಷ್ಠಾಹೋಮ ಬಳಿಕ ಬೆಳಿಗ್ಗೆ 7.41ಕ್ಕೆ ಗಣಪತಿ ಪ್ರತಿಷ್ಠೆ ಮತ್ತು ಶಿಖರ ಪ್ರತಿಷ್ಠೆ ಕಾರ್ಯದ ಬಳಿಕ ಬೆಳಿಗ್ಗೆ 8.30 ಗಂಟೆಗೆ ಚಂಡಿಕಾಹೋಮ ಪ್ರಾರಂಭವಾಗಲಿದೆ. ಈ ಮೂಹೂರ್ತದಲ್ಲಿ ಸುಬ್ರಮಣ್ಯ ಮತ್ತು ನಾಗಪ್ರತಿಷ್ಠಾ ಹೋಮಗಳು ಕೂಡ ನಡೆಯಲಿದೆ. ಅದೇ ದಿನ ಪೂರ್ವಾಹ್ನ 11.14ಕ್ಕೆ ವೃಷಭ ಲಗ್ನದಲ್ಲಿ, ಸುಬ್ರಮಣ್ಯ ಪ್ರತಿಷ್ಠೆ ಮತ್ತು ಶಿಖರ ಪ್ರತಿಷ್ಠೆ ದೈವೀ ಕಾರ್ಯ ಪೂರ್ಣಗೊಂಡ ಬಳಿಕ 11.40ಕ್ಕೆ ನಾಗಪ್ರತಿಷ್ಠೆ, ಚಂಡಿಕಾಹೋಮ ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಲಿದೆ. ಅದೇ ದಿನ ರಾತ್ರಿ ಆಶ್ಲೇಷಬಲಿ, ನಂದಿ ಶಯ್ಯಾಧಿವಾಸ ಬ್ರಹ್ಮಕಲಶ ಪ್ರತಿಷ್ಠಾಪನೆಗಳು ನಡೆಯಲಿದೆ.

ತಾ. 6 ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಠಾಹೋಮ, ಪೂರ್ವಾಹ್ನ 11.10ಕ್ಕೆ ವೃಷಭ ಲಗ್ನದಲ್ಲಿ ತಂತ್ರಿಗಳಾದ ವೀರಾಜಪೇಟೆಯ ಕೆ. ದಿವಾಕರ ಭಟ್ ಅವರಿಂದ ಈಶ್ವರ ದೇವರ ಪ್ರತಿಷ್ಠೆ, ನಂದಿ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಅಷ್ಟಗಂಧ ಲೇಪನ, ಬ್ರಹ್ಮಕಲಶ ಅಭಿಷೇಕ, ಮಹಾಪೂಜೆ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಯಿಂದ ದೇವಪ್ರತಿಷ್ಠಾ ಬಲಿ ಆರಂಭಗೊಳ್ಳಲಿದೆ. ಈ ಕೈಂಕರ್ಯ ಪೂರ್ಣಗೊಂಡು ಮಹಾ ಮಂಗಳಾರತಿ ಆದ ಬಳಿಕ ತಂತ್ರಿಗಳಿಂದ ಆಶೀರ್ವಚನ ಮತ್ತು ಫಲಮಂತ್ರಾಕ್ಷತೆ ಜರುಗಲಿದೆ. 3 ದಿನಗಳ ಕಾಲ ಪ್ರಸಾದ ವಿನಿಯೋಗ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮವಿದೆ. ಚಂಡಿಕಾಹೋಮ ಮಾಡಲು ಇಚ್ಚಿಸುವ ಭಕ್ತಾದಿಗಳು ಶ್ರೀ ಮಹಾದೇವರ ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪಕಿಸುವಂತೆ ದೇವಾಲಯ ಸಮಿತಿ ತಿಳಿಸಿದೆ.