ಕೂಡಿಗೆ, ಮಾ. 1: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಯುವಕ ಸಂಘದ ವತಿಯಿಂದ ಶಿವರಾತ್ರಿಯ ಹಬ್ಬದ ಅಂಗವಾಗಿ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ಮತ್ತು ಪುರುಷರಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಗಳು ನಡೆದವು.
ಪಂದ್ಯಾಟವನ್ನು ರಾಜ್ಯ ಐಎನ್‍ಟಿಯೂಸಿ ಉಪಾಧ್ಯಕ್ಷ ಮುತ್ತಪ್ಪ ಉದ್ಘಾಟಿಸಿ, ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾಕೂಟಗಳು ನಡೆಸುವದರಿಂದ ಗ್ರಾಮಸ್ಥರು ಒಂದೆಡೆ ಸೇರಿ ಸ್ನೇಹ ಸಮ್ಮಿಲನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವದು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜು ಮಾತನಾಡಿ, ಕ್ರೀಡಾಕೂಟಗಳಿಂದ ಜನರ ಒಗ್ಗೂಡಿಕೆಯ ಮೂಲಕ ಗ್ರಾಮದ ಪ್ರಗತಿಯತ್ತ ಸಾಗಲು ಅನುಕೂಲವಾಗುತ್ತದೆ ಎಂದರು.
ವೇದಿಕೆಯಲ್ಲಿ ರಾಜ್ಯ ಐಎನ್‍ಟಿಯೂಸಿ ಪ್ರಧಾನ ಕಾರ್ಯದರ್ಶಿ ಮುದ್ದಪ್ಪ, ತೊರೆನೂರು ಗ್ರಾ.ಪಂ.ನ ಸದಸ್ಯ ಪಿ.ಡಿ. ರವಿ, ಕಿಶೋರ್ ಕುಮಾರ್, ತಾರಾ ಉದಯ್, ಕೊಡಗು ಜಿಲ್ಲಾ ಐಎನ್‍ಟಿಯೂಸಿ ಅಧ್ಯಕ್ಷ ಹಮೀದ್ ಸೇರಿದಂತೆ ಯುವಕ ಸಂಘದ ಉಪಾಧ್ಯಕ್ಷ ಎಸ್.ಟಿ. ಉದಯ್, ಕಾರ್ಯದರ್ಶಿ ಡೆಲೆನ್ ಕಿರಣ್ ಹಾಗೂ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಆನಂದ್ ವಹಿಸಿದ್ದರು. ವಾಲಿಬಾಲ್ ಪಂದ್ಯಾಟದಲ್ಲಿ ರಾಮಣ್ಣ ತಂಡ ಪ್ರಥಮ, ದೇವರಾಜ್ ತಂಡ ದ್ವಿತೀಯ, ದಾಸಾಪುರ ತಂಡ ತೃತೀಯ ಸ್ಥಾನ ಗಳಿಸಿದರು. ವಿಜೇತ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು.
ಥ್ರೋಬಾಲ್‍ನಲ್ಲಿ ಮದೆನಾಡು ಫ್ರೆಂಡ್ಸ್ ತಂಡ ಪ್ರಥಮ, ಅಳಿಲುಗುಪ್ಪೆ ಶಾರದ ತಂಡ ದ್ವಿತೀಯ, ಹೆಬ್ಬಾಲೆ ತಂಡ ತೃತೀಯ ಸ್ಥಾನ ಗಳಿಸಿದರು. ಈ ಸಂದರ್ಭ ಟಿ.ಡಿ. ವಾಸು, ಮೀನಾಕ್ಷಿ, ಎನ್.ಎಂ. ಮುದ್ದಪ್ಪ, ಪಿ.ಡಿ. ರವಿ ಅವರನ್ನು ಸನ್ಮಾನಿಸಲಾಯಿತು.