ವೀರಾಜಪೇಟೆ, ಮಾ. 2 : ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಈಗಿರುವ 16 ವಾರ್ಡ್‍ಗಳನ್ನು ಜನಸಂಖ್ಯೆ ಆಧಾರದ ಮೇಲೆ ವಿಂಗಡಿಸಿ 18 ವಾರ್ಡ್‍ಗಳನ್ನಾಗಿ ಮಾರ್ಪಡಿಸಿ ಮರು ಪರಿಷ್ಕರಿಸಲು ಕೋರಿ ಜಿಲ್ಲಾಧಿಕಾರಿಗೆ ಕಳುಸುವಂತೆ ಸಭೆ ತೀರ್ಮಾನಿಸಿತು.ಗಣತಿ ಪ್ರಕಾರ ವೀರಾಜಪೇಟೆ ಪಟ್ಟಣದಲ್ಲಿ 17,224 ಜನಸಂಖ್ಯೆ ಇದ್ದು, ಪಂಜರ್‍ಪೇಟೆಗೆ ಒತ್ತಾಗಿರುವ ನಿಸರ್ಗ ಬಡಾವಣೆ ಹಾಗೂ ಚಿಕ್ಕಪೇಟೆಗೆ ಒತ್ತಾಗಿರುವ ಮೈಕ್ರೋವೇವ್‍ನ ಬಡಾವಣೆಯನ್ನು ಪಟ್ಟಣ ಪಂಚಾಯಿತಿಗೆ ಸೇರಿಸಿ, ಈಗಿರುವ 16 ವಾರ್ಡ್‍ಗಳ ಜೊತೆಗೆ ಈ ಎರಡು ವಾರ್ಡ್‍ಗಳನ್ನು ಸೇರಿಸಲಾಗಿದೆ. ಹೊಸ ವಾರ್ಡ್‍ಗಳನ್ನು ಸದಸ್ಯರ ಸಲಹೆ ಪಡೆದು ಪರಿಷ್ಕರಿಸುವಂತೆ ಹಿರಿಯ ಸದಸ್ಯ ಇ.ಸಿ. ಜೀವನ್ ಸಭೆಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಮಾಜಿ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಮಾತನಾಡಿ ಎಫ್.ಎಂ.ಸಿ. ರಸ್ತೆಯ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಬಸ್ಸುಗಳನ್ನು ಪ್ರಯಾಣಿಕರು ಇಳಿಯುವ ಸಲುವಾಗಿ ಗಣಪತಿ ದೇವಾಲಯದ ಮುಂಭಾಗದಲ್ಲಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಈಗ ಬಸ್ಸುಗಳು ಗಡಿಯಾರ ಕಂಬಕ್ಕೆ ಒತ್ತಾಗಿ ನಿಲ್ಲುತ್ತಿರುವದರಿಂದ ಹಿಂದೆ ಬರುವ ವಾಹನಗಳಿಗೆ ಬಲಭಾಗಕ್ಕೆ ತಿರುಗಿಸಲು ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಮಲಬಾರ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿ ಗೇಟ್‍ನ ಮುಂದೆ ತಾಲೂಕು ಕಚೇರಿಗೆ ಬರುವ ವಾಹನಗಳನ್ನು ನಿಲ್ಲಿಸುವದರಿಂದ ಹಿಂದೂ ರುದ್ರಭೂಮಿಗೆ ಶವ ಹೊತ್ತು ಸಾಗಲು ಅಡಚಣೆ ಉಂಟಾಗುತ್ತಿದೆ ಎಂದರು.

ವೀರಾಜಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಆಟೋ ನಿಲ್ದಾಣದಲ್ಲಿ ವೃದ್ದರು, ಮಹಿಳೆಯರು ಮಕ್ಕಳು ರಾತ್ರಿ ವೇಳೆಯಲ್ಲಿ ಆಟೋವನ್ನು ಕೇಳಿದರೆ ಬಾಡಿಗೆಗೆ ಬರುವದಿಲ್ಲ. ಪೊಲೀಸರು ಪ್ರಯಾಣಿಕರಿಗೆ ರಕ್ಷಣೆ ಒದಗಿಸಬೇಕು ಎಂದು ಜೀವನ್ ಸಭೆಯಲ್ಲಿ ತಿಳಿಸಿದರು. ಸದಸ್ಯೆ ಶೀಬಾ ಪ್ರಥ್ವಿನಾಥ್ ಮಾತನಾಡಿ ಮೀನುಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯ ಮೃತದೇಹ ಸುಡುವ ಕಟ್ಟಿಗೆ ಚಿತಾಗಾರ ದುಸ್ಥಿತಿಯಲ್ಲಿದೆ. ಇದನ್ನು ಪಂಚಾಯಿತಿಯಿಂದ ದುರಸ್ತಿ ಪಡಿಸುವಂತೆ ಆಗ್ರಹಿಸಿದರು.

ಸಭೆಯಲ್ಲಿ ಹಾಜರಿದ್ದ ವೀರಾಜಪೇಟೆಯ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಅವರು ವಾಹನ ಸಂಚಾರ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳುವದಾಗಿ ಸಭೆಗೆ ತಿಳಿಸಿದರು.

ಚರ್ಚೆಯಲ್ಲಿ ಸದಸ್ಯರುಗಳಾದ ಎಸ್.ಎಚ್.ಮೊೈನುದ್ದೀನ್, ಎಸ್.ಎಚ್.ಮತೀನ್, ರಚನ್ ಮೇದಪ್ಪ, ಮಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ ಮತ್ತಿತರರು ಭಾಗವಹಿಸಿದ್ದರು.

ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನೀತಾ, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸಿಬ್ಬಂದಿಗಳು ಹಾಜರಿದ್ದರು.