ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಆಧಾರ್ ಆಧಾರ

ನವದೆಹಲಿ, ಮಾ. 2: ಬಲ್ಕ್ ಟಿಕೆಟ್ ಬ್ಲಾಕ್ ಮಾಡುವ ದಲ್ಲಾಳಿಗಳಿಗೆ ಕಡಿವಾಣ ಹಾಕಲು ಹಾಗೂ ಮೋಸದ ಬುಕ್ಕಿಂಗ್ ಅನ್ನು ತಡೆಯುವದಕ್ಕಾಗಿ ರೇಲ್ವೆ ಇಲಾಖೆ ಶೀಘ್ರದಲ್ಲೇ ಆಧಾರ್ ಆಧಾರಿತ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಟಿಕೆಟ್ ದರದಲ್ಲಿ ರಿಯಾಯಿತಿ ಪಡೆಯಲು ಹಿರಿಯ ನಾಗರಿಕರಿಗೆ ಏಪ್ರಿಲ್ 1 ರಿಂದ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದ್ದು, ಇದು ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಜಾರಿಯಲ್ಲಿರಲಿದೆ. ಬಳಿಕ ಅದನ್ನು ಎಲ್ಲರಿಗೂ ವಿಸ್ತರಿಸುವ ಸಾಧ್ಯತೆ ಇದೆ. ಇಂದು 2017-18ನೇ ಸಾಲಿನ ಹೊಸ ವ್ಯವಹಾರಿಕ ಯೋಜನೆಗಳನ್ನು ಪ್ರಕಟಿಸಿದ ರೇಲ್ವೆ ಸಚಿವ ಸುರೇಶ್ ಪ್ರಭು ಅವರು, ಶೀಘ್ರದಲ್ಲೇ ಆಧಾರ್ ಆಧಾರಿತ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವದು. ಅಲ್ಲದೆ ನಗದು ರಹಿತ ವ್ಯವಹಾರಕ್ಕಾಗಿ ರೇಲ್ವೆ 6 ಸಾವಿರ ಪಿಒಎಸ್ ಮಷಿನ್‍ಗಳನ್ನು ಒದಗಿಸಲಾಗುವದು ಮತ್ತು ದೇಶಾದ್ಯಂತ ಒಂದು ಸಾವಿರ ಆಟೋಮೆಟಿಕ್ ಟಿಕೆಟ್ ಮಷಿನ್‍ಗಳನ್ನು ಸ್ಥಾಪಿಸಲಾಗುವದು ಎಂದರು. ನಗದು ರಹಿತ ವ್ಯವಹಾರಕ್ಕೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಶೀಘ್ರದಲ್ಲಿ ಸಮಗ್ರ ಟಿಕೆಟ್ ಬುಕ್ಕಿಂಗ್ ಆಪ್ ಅನ್ನು ಬಿಡುಗಡೆ ಮಾಡುವದಾಗಿ ಸಚಿವರು ತಿಳಿಸಿದ್ದಾರೆ.

ನೋಟು ನಿಷೇಧದಿಂದ ರೂ. 8,000 ಕೋಟಿ ಆದಾಯ ನಷ್ಟ

ನವದೆಹಲಿ, ಮಾ. 2: ಕೇಂದ್ರ ಸರ್ಕಾರದ ಗರಿಷ್ಠ ಮೌಲ್ಯದ ನೋಟು ನಿಷೇಧ ಕ್ರಮದಿಂದಾಗಿ ಆಟೋಮೊಬೈಲ್ ಹಾಗೂ ಟ್ರಾಕ್ಟರ್ ವಲಯದ ಕಂಪೆನಿಗಳಿಗೆ ಸುಮಾರು 8,000 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪೆನಿಯ ಆಡಳಿತ ನಿರ್ದೇಶಕ ಪವನ್ ಗೊಯೆಂಕಾ ಅವರು ಹೇಳಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್‍ನಲ್ಲಿ ಹಬ್ಬದ ಸೀಸನ್ ಫಲವಾಗಿ ಉತ್ತುಂಗದ ಮಾರಾಟದಲ್ಲಿದ್ದ ಆಟೋಮೊಬೈಲ್ ಮತ್ತು ಟ್ರ್ಯಾಕ್ಟರ್ ರಂಗದ ಕಂಪೆನಿಗಳು, 500 ಹಾಗೂ 1000 ರೂಪಾಯಿ ನೋಟ್ ನಿಷೇಧಿಸಿದ ನಂತರ ನವೆಂಬರ್ ಮತ್ತು ಡಿಸೆಂಬರ್‍ನಲ್ಲಿ ಬಹುತೇಕ ನಿಲುಗಡೆಗೆ ಬಂದು ತಲಪಿದ್ದವು ಎಂದು ಗೊಯೆಂಕಾ ತಿಳಿಸಿದ್ದಾರೆ. ನವೆಂಬರ್‍ನಲ್ಲಿ ವಾಹನ ಮಾರಾಟ ಶೇ. 5.48 ರಷ್ಟು ಕುಗ್ಗಿದರೆ ಡಿಸೆಂಬರ್‍ನಲ್ಲಿ ಅದು ಇನ್ನಷ್ಟು ತಳಮಟ್ಟಕ್ಕೆ ಹೋಯಿತು. ಇದು ಕಳೆದ 43 ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ 2013ರ ಮಾರ್ಚ್‍ನಲ್ಲಿ ವಾಹನಗಳ ಒಟ್ಟು ಮಾರಾಟ ಶೇ. 7.75 ರ ಕುಸಿತವನ್ನು ಕಂಡಿತು ಎಂದು ಅವರು ಹೇಳಿದ್ದಾರೆ.

ಕೇರಳ ಸಿಎಂ ಶಿರಚ್ಛೇದದ ಹೇಳಿಕೆಗೆ ಸಿಪಿಐಎಂ ಖಂಡನೆ

ನವದೆಹಲಿ, ಮಾ. 2: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿರಚ್ಛೇಧಕ್ಕೆ ಒಂದು ಕೋಟಿ ಬಹುಮಾನ ಘೋಷಿಸಿರುವ ಆರ್‍ಎಸ್‍ಎಸ್ ಮುಖಂಡನ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರುವಾರ ಸಿಪಿಐ-ಎಂ ಪ್ರಶ್ನಿಸಿದೆ. ಕೇರಳದಲ್ಲಿ 300 ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗೆ ವಿಜಯನ್ ಕಾರಣ ಎಂದು ಆರೋಪಿಸಿ, ಮಧ್ಯಪ್ರದೇಶದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕುಂದನ್ ಚಂದ್ರಾವತ್ ಎಂಬ ವ್ಯಕ್ತಿ ಎಡ ಪಕ್ಷದ ಮುಖ್ಯಮಂತ್ರಿಯವರ ಶಿರಚ್ಛೇಧ ಮಾಡಿದವರಿಗೆ ತನ್ನೆಲ್ಲಾ ಆಸ್ತಿ ಮಾರಿ ಒಂದು ಕೋಟಿ ರೂಪಾಯಿ ನೀಡುವದಾಗಿ ಘೋಷಿಸಿದ್ದರು. ಉಜ್ಜಯಿನ್‍ನಲ್ಲಿ ಆರ್‍ಎಸ್‍ಎಸ್ ಮುಖಂಡ ನೀಡಿರುವ ಈ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು. “ಆರ್‍ಎಸ್‍ಎಸ್ ಭಯೋತ್ಪಾದಕ ಸಂಸ್ಥೆ ಎಂಬ ನಿಜ ಬಣ್ಣ ಇದರಿಂದ ಬಯಲಾಗಿದೆ. ಈಗಲಾದರೂ ಪ್ರಧಾನಿ ಮತ್ತು ಅವರ ಸರ್ಕಾರ ಮೌನವಾಗಿರದೆ ಕ್ರಮ ತೆಗೆದುಕೊಳ್ಳುವದೇ?” ಎಂದು ಸಿಪಿಐ-ಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪ್ರಶ್ನಿಸಿದ್ದಾರೆ.

ಬೆಂಗಳೂರು ಸ್ಟೀಲ್ ಬ್ರಿಡ್ಜ್ ಯೋಜನೆ ರದ್ದು

ಬೆಂಗಳೂರು, ಮಾ. 2: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಗುರುವಾರ ರದ್ದುಗೊಳಿಸಿದೆ. ಈ ಸಂಬಂಧ ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು, ತೀವ್ರ ನೋವಿನಿಂದ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸುಮಾರು 1800 ಕೋಟಿ ರೂಪಾಯಿ ವೆಚ್ಚದ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಸ್ಟೀಲ್ ಬ್ರಿಡ್ಜ್ ಯೋಜನೆ ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದು, ಇದರಲ್ಲಿ ಯಾವದೇ ಭ್ರಷ್ಟಾಚಾರ ನಡೆದಿಲ್ಲ ಎಂದರು. ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜಾರ್ಜ್, ಬಿಜೆಪಿ ಅಭಿವೃದ್ಧಿ ವಿರೋಧಿಯಾಗಿದ್ದು, ರಾಜ್ಯದ ಹಿತಕ್ಕೆ ವಿರುದ್ಧವಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಮತ್ತು ಈ ಸಂಬಂಧ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದರು. ಅಲ್ಲದೆ ಕೆಲವು ಎನ್‍ಜಿಒಗಳು ಸಹ ಬೆಂಗಳೂರು ಅಭಿವೃದ್ಧಿ ಸಹಿಸುತ್ತಿಲ್ಲ ಎಂದು ಸಚಿವರು ಆರೋಪಿಸಿದ್ದಾರೆ.

ಭಾರತದಿಂದ 39 ಪಾಕ್ ಖೈದಿಗಳ ಬಿಡುಗಡೆ

ನವದೆಹಲಿ, ಮಾ. 2: ಜೈಲಿನಲ್ಲಿ ಸೆರವಾಸ ಅನುಭವಿಸುತ್ತಿದ್ದ 39 ಪಾಕಿಸ್ತಾನ ಖೆÉೈದಿಗಳನ್ನು ಭಾರತ ಗುರುವಾರ ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡಿಗಿರುವ ಪಾಕಿಸ್ತಾನ ಖೆÉೈದಿಗಳಲ್ಲಿ 21 ಮಂದಿ ನಾಗರೀಕ ಕೈದಿಗಳಾಗಿದ್ದರೆ, 18 ಮಂದಿ ಮೀನುಗಾರರಾಗಿದ್ದಾರೆ. ಪಾಕಿಸ್ತಾನ ಖೆÉೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಶಾಂತಿ ಪ್ರಸ್ತಾವನೆಗೆ ಭಾರತ ಪೂರಕವಾಗಿ ಸ್ಪಂದನ ನೀಡಿದೆ. ಬಿಡುಗಡೆ ಕುರಿತಂತೆ ಘೋಷಣೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖೆÉೈದಿಗಳು ಶೀಘ್ರಗತಿಯಲ್ಲಿ ತಮ್ಮ ತಾಯ್ನಾಡಿಗೆ ತೆರಳುವದು ಸೇರಿದಂದೆ ಅವರ ಎಲ್ಲಾ ಮಾನವೀಯ ವಿಷಯಗಳತ್ತ ಗಮನ ನೀಡಲಿದ್ದೇವೆಂದು ಎಂದು ಹೇಳಿದೆ. ಸೌಹಾರ್ದತೆಯ ಸಂಕೇತವಾಗಿ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನ ತನ್ನ ಜೈಲಿನಲ್ಲಿದ್ದ 217 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿತ್ತು. ಇದಲ್ಲದೆ, ಪಾಕಿಸ್ತಾನ ಜೈಲಿನಲ್ಲಿ ಹಲವು ವರ್ಷಗಳಿಂದಲೂ ಸೆರೆವಾಸ ಅನುಭವಿಸುತ್ತಿದ್ದ ಭಾರತೀಯ ಯೋಧ ಬಾಬೂಲಾಲ್ ಚೌಹಾಣ್ ಅವರನ್ನು ಜನವರಿ 21 ರಂದು ವಾಘಾ ಗಡಿ ಮೂಲಕ ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಕಳುಹಿಸಿಕೊಟ್ಟಿದ್ದರು. ಈ ಹಿನ್ನೆಲೆ ಸೌಹಾರ್ದತೆಯ ಸಂಕೇತವಾಗಿ ಭಾರತ ಇದೀಗ 39 ಖೆÉೈದಿಗಳನ್ನು ಬಿಡುಗಡೆ ಮಾಡಿದೆ.

ಕೊಹ್ಲಿಗೆ 3 ನೇ ಬಾರಿಗೆ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿ

ಬೆಂಗಳೂರು, ಮಾ. 2: ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಬಿಸಿಸಿಐ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದು ಇದು ಮೂರನೇ ಬಾರಿಗೆ ವಿರಾಟ್ ಪಡೆಯುತ್ತಿರುವ ಪ್ರಶಸ್ತಿಯಾಗಿದೆ. ಎನ್ ರಾಮ್, ರಾಮಚಂದ್ರ ಗುಹಾ ಹಾಗೂ ಡಯಾನ ಎಡುಲ್ಜಿ ಅವರನ್ನೊಳಗೊಂಡ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿ 2015-16ನೇ ಸಾಲಿನ ಗೌರವಗಳನ್ನು ಪ್ರಕಟಿಸಿದ್ದು ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಪ್ರತಿಷ್ಠಿತ ದಿಲೀಪ್ ಸರ್ದೇಸಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ತಾ. 8 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 2011-12 ಮತ್ತು 2014-15ರ ಸಾಲಿನಲ್ಲಿ ವಿರಾಟ್ ಕೊಹ್ಲಿ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪ್ರಶಸ್ತಿಯನ್ನು ಮೂರನೇ ಬಾರಿಗೆ ಪಡೆಯುತ್ತಿರುವ ಮೊದಲ ಆಟಗಾರ ಎನಿಸಿದ್ದಾರೆ. ಇನ್ನು ಆರ್. ಅಶ್ವಿನ್ ಎರಡನೇ ಬಾರಿಗೆ ದಿಲೀಪ್ ಸರ್ದೇಸಾಯಿ ಪ್ರಶಸ್ತಿಯನ್ನು ಪಡೆಯುತ್ತಿರುವ ಮೊದಲ ಆಟಗಾರನಾಗಿದ್ದಾರೆ.