ಸೋಮವಾರಪೇಟೆ, ಮಾ. 2: ಸರಕಾರವು ಕೊಳವೆ ಬಾವಿಯನ್ನು ತೆಗೆಯಲು ಅನುಮತಿ ನೀಡಿದ್ದರೂ ಇಲಾಖಾಧಿಕಾರಿಗಳು ಬೆಳೆಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ಮುಂದುವರೆದರೆ ತಾಲೂಕಿನ ಬೆಳೆಗಾರರನ್ನು ಸೇರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ತಾಲೂಕು ಕಾಫಿ ಬೆಳೆಗಾರರ ಸಂಘ ಎಚ್ಚರಿಸಿದೆ.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಮಾತನಾಡಿ, ಸರಕಾರವು ರಾಜ್ಯದ 65 ತಾಲೂಕುಗಳಲ್ಲಿ ಹೊಸ ಕೊಳವೆ ಬಾವಿ ತೆಗೆಯಲು ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಆದೇಶವನ್ನು ಹೊರಡಿಸಿದ್ದಾರೆ. ಖಾಸಗಿ ನೀರಾವರಿ ಕೊಳವೆ ಬಾವಿಗಳನ್ನು ತೆಗೆಯಲು ರೈತರು ಮತ್ತು ಕಾಫಿ ಬೆಳೆಗಾರರು ಮುಂದಾಗುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಎರಡು ದಿನಗಳ ಹಿಂದೆ ತಾಲೂಕಿನಲ್ಲಿ ಬೆಳೆಗಾರರೊಬ್ಬರು ಕೊಳವೆ ಬಾವಿ ತೆಗೆಸುತ್ತಿದ್ದ ಸಂದರ್ಭ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ವಿನಾಕಾರಣ ತೊಂದರೆ ನೀಡಿದ್ದಾರೆ. ಕೊಳವೆ ಬಾವಿ ತೆಗೆಯುವ ವಾಹನ ಬರುವ ಸಂದರ್ಭದಲ್ಲೂ ಅನವಶ್ಯಕವಾಗಿ ಕೆಲವು ಇಲಾಖೆಯ ಅಧಿಕಾರಿಗಳು ದಾಖಲಾತಿಯ ತಪಾಸಣೆಯ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಕೊಡಗು ಜಿಲ್ಲೆಯಿಂದ ಹೊರ ಜಿಲ್ಲೆಗೆ ನಾಲೆಯ ಮೂಲಕ ಹೋಗುತ್ತಿರುವ ನೀರಿಗೆ ಪಂಪ್ ಅಳವಡಿಸಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಲ್ಲಿನ ರೈತರಿಗೆ ಅನುಮತಿ ನೀಡುತ್ತಾರೆ. ಆದರೆ ಜಿಲ್ಲೆಯ ರೈತರು ಪಂಪ್ ಸೆಟ್ ಅಳವಡಿಸಲು ಅವಕಾಶ ಇರುವದಿಲ್ಲ. ಇಂತಹ ತಾರತಮ್ಯ ನೀತಿಯನ್ನು ಬೆಳೆಗಾರರ ಸಂಘ ಖಂಡಿಸುತ್ತದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಭೂಮಿ ಒಣಗುತ್ತಿದ್ದು ನೀರಿನ ಅವಶ್ಯಕತೆ ಹೆಚ್ಚಿದೆ. ಕಾಫಿ ಹೂಮಳೆಗಾಗಿ ನೀರು ಸಿಂಪಡಿಸಲು ಕೇವಲ 15 ದಿನಗಳು ಮಾತ್ರ ಅವಕಾಶವಿದೆ. ನಂತರ ಉಪಯೋಗಕ್ಕೆ ಬರುವದಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಬೋರ್ವೆಲ್ ಕೊರೆಸಲು ಅವಕಾಶ ನೀಡದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಈ ಧೋರಣೆಯನ್ನು ಮುಂದುವರೆಸಿದಲ್ಲಿ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಲಾಗುವದು ಎಂದು ಎಚ್ಚರಿಕೆ ನೀಡಿದರು. ತಾಲೂಕಿನ ಅಬ್ಬೂರುಕಟ್ಟೆ, ಆಡಿನಾಡೂರು, ಕೂತಿ, ನಗರಳ್ಳಿ, ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಮಳೆಗಾಲಕ್ಕೂ ಮೊದಲು ಅರಣ್ಯದಲ್ಲಿ ರುವ ಕೆರೆಗಳಿಂದ ಹೂಳೆತ್ತಿಸಿ ನೀರನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡದೇ ಸರಕಾರದ ಹಣವನ್ನು ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಗೋಷ್ಠಿಯಲ್ಲಿದ್ದ ಬೆಳೆಗಾರರ ಸಂಘದ ಪ್ರಮುಖರಾದ ಅನಂತ್ರಾಮ್ ಆರೋಪಿಸಿದರು.
ಕೂತಿ ಗ್ರಾಮದಲ್ಲಿ ಕೆರೆಯ ಮೇಲ್ಭಾಗ ಅಳವಡಿಸಿದ್ದ ಪಂಪ್ಸೆಟ್ನ್ನು ಕಾಡಾನೆಗಳು ಕೆರೆಯೊಳಗೆ ತಳ್ಳಿವೆ. ಬೆಳೆಗಾರರು ಜೀವಭಯದಲ್ಲಿ ಬದುಕು ನಡೆಸು ವಂತಾಗಿದೆ. ವೀರಾಜಪೇಟೆ ಭಾಗದ ಆನೆಗಳನ್ನು ಹಿಡಿದು ಸ್ಥಳಾಂತರಿಸಿದ ನಂತರ ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ 2 ಪುಂಡಾನೆಗಳನ್ನು ಸ್ಥಳಾಂತರಿಸುವ ಬಗ್ಗೆ ಅರಣ್ಯಾಧಿಕಾರಿ ಗಳು ಭರವಸೆ ನೀಡಿದ್ದರು. ಇದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಎಂ. ಲವ, ಕೆ.ಪಿ. ಬಸಪ್ಪ, ಎಸ್.ಸಿ. ಪ್ರಕಾಶ್, ಎನ್.ಎನ್. ರಮೇಶ್, ವರಲಕ್ಷ್ಮೀ ಸಿದ್ದೇಶ್ವರ್, ಬಿ.ಜಿ.ಪೂವಮ್ಮ ಮತ್ತಿತರರು ಉಪಸ್ಥಿತರಿದ್ದರು.