ಮಡಿಕೇರಿ, ಮಾ. 2: ಕರ್ನಾಟಕ ರಾಜ್ಯ ಬಂದೀಖಾನೆಗಳ ಹೊಣೆಗಾರಿಕೆ ನಿರ್ವಹಿಸುತ್ತಿರುವ ಪೊಲೀಸ್ ಮಹಾ ನಿರ್ದೇಶಕ ಹೆಚ್.ಎಸ್. ಸತ್ಯನಾರಾಯಣ ರಾವ್ ಅವರು ಇಂದು ಮಡಿಕೇರಿ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಕರ್ಣಂಗೇರಿ ಯಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ತೆರಳಿದ ಅವರು, ಕಾರಾಗೃಹದ ಖುದ್ದು ಪರಿವೀಕ್ಷಣೆ ನಡೆಸಿದ್ದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿ ಮಡಿಕೇರಿಗೆ ಬಂದು ತಂಗುವದರೊಂದಿಗೆ ಇಂದು ಕಾರಾಗೃಹದ ಅಧಿಕಾರಿ- ಸಿಬ್ಬಂದಿಗಳ ಕುಂದು ಕೊರತೆ ಆಲಿಸಿದ ಡಿ.ಜಿ. ಸತ್ಯನಾರಾಯಣ ರಾವ್ ಅವರು, ಪ್ರಸಕ್ತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾಗಿ ವಿಶ್ವಸನೀಯ ಮೂಲಗಳಿಂದ ತಿಳಿದಿದೆ.ಸಿಬ್ಬಂದಿ ಬೇಡಿಕೆ ಅಧಿಕಾರಿ ಸತ್ಯನಾರಾಯಣ ರಾವ್ ಭೇಟಿ ಸಂದರ್ಭ ಸಿಬ್ಬಂದಿಗಳು ತಮ್ಮ ಬವಣೆ ಹೇಳಿಕೊಂಡಿದ್ದು, ರಾವ್ ಅವರು ಸಮಾಧಾನದಿಂದ ಎಲ್ಲವನ್ನೂ ಆಲಿಸಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ಜಿಲ್ಲಾ ಕಾರಾಗೃಹ ನೋಡಿಕೊಳ್ಳಲು 40 ಮಂದಿ ಉದ್ಯೋಗಿಗಳ ಅವಶ್ಯಕತೆಯಿದ್ದರೂ, ಈಗ ಕೇವಲ 18 ಉದ್ಯೋಗಿಗಳು ಹರಸಾಹಸದಿಂದ ಒತ್ತಡದೊಂದಿಗೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಈ ವೇಳೆ ಗಮನ ಸೆಳೆಯಲಾಗಿದೆ.

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಈ ಕಾರಾಗೃಹದಲ್ಲಿ ಹೆಚ್ಚಿನ ವೇಳೆ ವಿಚಾರಣಾ ಬಂದಿಗಳನ್ನು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಅಥವಾ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿಬ್ಬಂದಿ ಕೊರತೆಯಿಂದ ತುಂಬಾ ತೊಂದರೆ ಅನುಭವಿಸುತ್ತಿರುವದಾಗಿ ಸತ್ಯನಾರಾಯಣ ರಾವ್ ಅವರಿಗೆ ಮನವರಿಕೆ ಮಾಡಿದ್ದಾಗಿಯೂ ಗೊತ್ತಾಗಿದೆ.

ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಬಂದೀಖಾನೆ ಡಿ.ಜಿ. ಭೇಟಿ

(ಮೊದಲ ಪುಟದಿಂದ)

ನೀರಿನ ತೊಂದರೆ

ಒಂದೆಡೆ ಇರುವ ಸಿಬ್ಬಂದಿಗಳಿಗೆ ವಸತಿ ಸರಿಯಿಲ್ಲದೆ ಕರ್ತವ್ಯಕ್ಕೆ ಬವಣೆ ಪಡುತ್ತಿದ್ದರೆ, ಇನ್ನೊಂದೆಡೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವದಾಗಿಯೂ ಸತ್ಯನಾರಾಯಣ ರಾವ್ ಅವರ ಎದುರು ಅಳಲು ತೋಡಿಕೊಂಡಿದ್ದಾಗಿ ಗೊತ್ತಾಗಿದೆ.

ಕಾರಾಗಹಕ್ಕೆ ನೀರು ಸರಬರಾಜುಗೊಳ್ಳುತ್ತಿದ್ದ ಎರಡು ಕೊಳವೆ ಬಾವಿಗಳು ನೀರಿಲ್ಲದೆ ಹಾನಿಗೊಂಡಿದ್ದು, ಇತ್ತೀಚೆಗೆ ಹೊಸದಾಗಿ ಕೊರೆಸಲಾಗಿರುವ ಕೊಳವೆ ಬಾವಿಯಿಂದ ಕೂಡ ಸಮರ್ಪಕ ನೀರು ಬರುವದಿಲ್ಲವೆಂದು ಡಿ.ಜಿ. ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಪರಿಣಾಮ ಕಾರಾಗೃಹ ಸಿಬ್ಬಂದಿ ಹಾಗೂ ವಿಚಾರಣಾ ಬಂದಿಗಳ ನಿತ್ಯ ಸ್ನಾನ ಇತ್ಯಾದಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸಲು ತುರ್ತು ವ್ಯವಸ್ಥೆ ಕೋರಿ ವಿಚಾರಣಾ ಖೈದಿಗಳು ಅಧಿಕಾರಿ ಭೇಟಿಯಲ್ಲಿ ಬೇಡಿಕೆ ಸಲ್ಲಿಸಿದ್ದಾರೆ.

ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿರುವ ಸತ್ಯನಾರಾಯಣರಾವ್ ಅವರು, ಕಾರಾಗೃಹದ ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸುವ ಇಂಗಿತ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ. ನೀರಿನ ಬವಣೆ ನೀಗಿಸದಿದ್ದರೆ ತುಂಬಾ ಸಂಕಷ್ಟವನ್ನು ತಾವು ಅನುಭವಿಸಲಿರುವದಾಗಿ ಕಾರಾಗೃಹ ಬಂದಿಗಳು ಅಳಲು ತೋಡಿಕೊಂಡರೆಂದು, ಎಲ್ಲವನ್ನು ರಾವ್ ಸಮಚಿತ್ತದಿಂದ ಆಲಿಸುತ್ತಾ, ಪ್ರತಿಸ್ಪಂದಿಸಿದ್ದಾಗಿ ಮಾಹಿತಿ ಲಭಿಸಿದೆ.