ಕುಶಾಲನಗರ, ಮಾ. 2: ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆಶ್ರಯದಲ್ಲಿ ತಾ. 22 ರಂದು ಪರಿಸರ ಪ್ರೇಮಿಗಳಿಗೆ ರಾಜ್ಯಮಟ್ಟದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನದಿಗಳ ಮಾಲಿನ್ಯ ಹಾಗೂ ಪರಿಸರ ನಾಶದಿಂದಾಗಿ ಜಗತ್ತು ಅವನತಿಯತ್ತ ಸಾಗುತ್ತಿರುವದು ಆತಂಕಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನದಿ ಹಾಗೂ ಪರಿಸರ ಸಂರಕ್ಷಣೆಗೆ ಹೋರಾಡುತ್ತಿರುವ ಪರಿಸರ ಪ್ರೇಮಿಗಳ ಕಾರ್ಯವನ್ನು ಗುರುತಿಸಿ ಅವರನ್ನು ಅಭಿನಂದಿಸಲಾಗುವದು ಎಂದು ಮಾಹಿತಿ ನೀಡಿದರು.

ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ‘ನದಿ ಸಂರಕ್ಷಣೆಯಲ್ಲಿ ಸರಕಾರ ಮತ್ತು ಸಾರ್ವಜನಿಕರ ಜವಾಬ್ದಾರಿ’ ಎಂಬ ವಿಷಯದಡಿ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ತಾ. 10ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ತಾ. 10 ರಂದು ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಚರ್ಚಾ ಸ್ಪರ್ಧೆ ನಡೆಯಲಿದ್ದು, ಪ್ರಬಂಧ ಸ್ಪರ್ಧೆ ಜಿಲ್ಲೆಯ ಆಯಾಯ ಕಾಲೇಜುಗಳಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ತಾ. 22ರಂದು ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಗು ವದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಿ. ನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ 9980274900 ಅವರನ್ನು ಸಂಪರ್ಕಿಸಬಹುದಾಗಿದೆ. ಗೋಷ್ಠಿ ಯಲ್ಲಿ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸೂಫಿ, ಸಂಚಾಲಕ ಗಣೇಶ್ ಕುಮಾರ್, ರೈತ ವಿಭಾಗದ ರಾಜ್ಯ ಕಾರ್ಯದರ್ಶಿ ಪರ್ಲಕೋಟಿ ಪಾರ್ವತಿ, ತಾಲೂಕು ಸಂಘಟನಾ ಕಾರ್ಯದರ್ಶಿ ಅನೀತ್ ಇದ್ದರು.