ಮಡಿಕೇರಿ, ಮಾ. 2: ಸಾಮಾನ್ಯ ಜನತೆಗೆ ಇಂದು ಶುದ್ಧ ನೀರು, ಉತ್ತಮ ಆಹಾರ ಸಿಗುತ್ತಿಲ್ಲ. ಮಹಿಳೆಯರಿಗೂ ಸೂಕ್ತ ರಕ್ಷಣೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನತೆಯ ಕಣ್ಣೀರೊರೆಸುವ ಜನಪ್ರತಿನಿಧಿಗಳು ಗೆದ್ದು ಬಂದು ಅಧಿಕಾರ ನಡೆಸುವಂತಾಗಬೇಕಾಗಿದೆ ಎಂದು ಮಾಜಿ ಸಚಿವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷೆ ಡಾ. ಬಿ.ಟಿ. ಲಲಿತಾ ನಾಯಕ್ ಹೇಳಿದರು.ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜರುಗಿದ ‘‘ರಾಜಕೀಯದಿಂದ ಸಾಮಾಜಿಕ ಪರಿವರ್ತನೆ’’ ಎಂಬ ಧ್ಯೇಯದೊಂದಿಗೆ ನಡೆದ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಅರಣ್ಯ ನಾಶವಾಗುತ್ತಿದ್ದು, ಕೆಲವೇ ಕೆಲವು ಶ್ರೀಮಂತರಿಗೆ ಇಂದು ದೇಶದಲ್ಲಿ ಮನ್ನಣೆ ಸಿಗುತ್ತಿದೆ. ಕರ್ನಾಟಕದ ರಾಜಕಾರಣಿಗಳಿಗೆ ಎಷ್ಟು ಜಮೀನು ಇದ್ದರೂ ಸಾಲದು, ಕೆರೆ ಒತ್ತುವರಿಯಾಗುತ್ತಿದೆ. ಸಾರ್ವಜನಿಕರ ಹಿತ ಕಾಪಾಡುವದು, ಜನರ ಭಾವನೆಗಳಿಗೆ ಬೆಲೆ ಕೊಡುವ ಅಗತ್ಯವಿದೆ.

ರಾಜಕಾರಣಿಗಳು ಕಪ್ಪ ಕೊಟ್ಟು ಹೈಕಮಾಂಡ್‍ನ್ನು ಮೆಚ್ಚಿಸುತ್ತಿದ್ದು, ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೊಡಗಿನಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿ ಬೆಳೆದಿದ್ದು, ಕೊಡಗಿನ ಜನರಲ್ಲಿ ಕನ್ನಡಾಭಿಮಾನವಿದೆ ಎಂದು ಅವರು ರಾಜಕೀಯ ಪಕ್ಷಗಳು ಜನಪರ ಚಿಂತನೆ ಮೂಡಿಸಿಕೊಳ್ಳಬೇಕಾಗಿದೆ ಎಂದರು.

ಬಹುಜನ ಸೋಷಿಯಲ್ ಪೌಂಡೇಶನ್‍ನ ರಾಜ್ಯಾಧ್ಯಕ್ಷ ಬಿ. ಗೋಪಾಲ್ ಮಾತನಾಡಿ ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಿದೆ. 40 ವರ್ಷಗಳ ಕಾಲ ಕಾಂಗ್ರೆಸ್ ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಅಲ್ಪಸಂಖ್ಯಾತರ ಮುಖಕ್ಕೆ ತುಪ್ಪ ಸವರಿ ಆಡಳಿತ ನಡೆಸಿದೆ. ಯಾವದೇ ಜನಪರ ಕಾಳಜಿ ವಹಿಸಲಿಲ್ಲ. ಶೇ. 25ರಷ್ಟಿರುವ ಎಸ್‍ಸಿ, ಎಸ್‍ಟಿ, ಶೇ. 15ರಷ್ಟಿರುವ ಅಲ್ಪಸಂಖ್ಯಾತರು ಹಾಗೂ ಶೇ. 45ರಷ್ಟಿರುವ ಹಿಂದುಳಿದ ವರ್ಗದ ಜನತೆ ಪಶುಗಳ ರೀತಿಯಲ್ಲಿ ಬದುಕುವಂತಾಗಿದೆ ಎಂದು ಆರೋಪಿಸಿದರು.

ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಯಥಾಸ್ಥಿತಿಯಲ್ಲಿ ಜಾರಿ ಮಾಡಿದ್ದರೆ ಇದೀಗ ದೇಶದಲ್ಲಿ ಅಸ್ಪøಶ್ಯತೆ ಹಾಗೂ ಹಿಂದುಳಿದವರು ಇರುತ್ತಿರಲಿಲ್ಲ. ಇಂದು ದಲಿತರು ಹಾಗೂ ಕೆಲವು ಅಲ್ಪಸಂಖ್ಯಾತರು ಮತವನ್ನು ಮಾರಾಟ ಮಾಡಿಕೊಳ್ಳುವ ದರಿಂದ ಹಿಂದುಳಿಯಲು ಕಾರಣವಾಗಿದೆ. ದಲಿತರು, ಕ್ರಿಶ್ಚಿಯನ್ನರು ಹಾಗೂ ಅಲ್ಪಸಂಖ್ಯಾತರು ಒಂದಾದಲ್ಲಿ ಅಧಿಕಾರವನ್ನು ಪಡೆದು ಅಭಿವೃದ್ಧಿ ಸಾಧಿಸಬಹುದು.

ಸಮಾವೇಶದ ಅಧ್ಯಕ್ಷತೆಯನ್ನು ಮಾಜಿ ರಾಜ್ಯಾಧ್ಯಕ್ಷ ಅಕ್ಬರ್ ಅಲಿ ವಹಿಸಿದ್ದರು. ಸಮಾರಂಭದಲ್ಲಿ ವಕೀಲ ಕುಂಞ ಅಬ್ದುಲ್ಲ, ಮುಖಂಡರಾದ ಪಿ.ಎಂ. ಖಾಸಿಂ, ಪಾರ್ಟಿಯ ರಾಜ್ಯ ಕಾರ್ಯದರ್ಶಿ ತಾಹೀರ್ ಹುಸೇನ್, ಉಪಾಧ್ಯಕ್ಷ ಪ್ರೊ. ಸಿದ್ದರಾಮಯ್ಯ, ಮುಸ್ಲಿಂ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಪಿ.ಎ. ಹನೀಫ್ ಹಾಗೂ ಇನ್ನಿತರರು ಇದ್ದರು. ಪಾರ್ಟಿಯ ಸದಸ್ಯ ಕೆ.ಟಿ. ಬಶೀರ್ ಸ್ವಾಗತಿಸಿ, ವಂದಿಸಿದರು.