ಮಡಿಕೇರಿ, ಮಾ. 3: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದ ವೃತ್ತಿ ಮತ್ತು ಸುರಕ್ಷತೆಯ ಬಗ್ಗೆ ಮುಂದುವರಿಕಾ ವೈದ್ಯ ಶಿಕ್ಷಣ ಕಾರ್ಯಕ್ರಮ ಜರುಗಿತು.
ದಕ್ಷಿಣ ಭಾರತದ ಪ್ರಾಂತೀಯ ಔದ್ಯೋಗಿಕ ಆರೋಗ್ಯ ಕೇಂದ್ರದಿಂದ ಆಗಮಿಸಿದ ವಿಜ್ಞಾನಿ ಡಾ. ರಾಜ್ಮೋಹನ್ ಪ್ರಸ್ತುತ ದೇಶದಲ್ಲಿನ ವೈದ್ಯಕೀಯ ಸಂಬಂಧಿ ವೃತ್ತಿಗಳ ಆರೋಗ್ಯ ಮತ್ತು ಸುರಕ್ಷತೆಯ ಚಿತ್ರಣ ವಿವರಿಸಿದರು. ಮುಂದುವರೆದ ದೇಶಗಳಲ್ಲಿನ ವ್ಯವಸ್ಥೆ ಮತ್ತು ಭಾರತದ ಇಂದಿನ ವೃತ್ತಿ ವ್ಯವಸ್ಥೆಗಳ ವಿಚಾರವನ್ನು ಮತ್ತು ಆಗಬೇಕಾಗಿರುವ ಸುಧಾರಣೆ ಬಗ್ಗೆ ಬೆಳಕು ಚೆಲ್ಲಿದರು.
ದೆಹಲಿಯಿಂದ ಆಗಮಿಸಿದ ಖ್ಯಾತ ಪ್ರಾಧ್ಯಾಪಕ ಡಾ. ಜುಗಲ್ ಕಿಶೋರ್ ವೈದ್ಯಕೀಯ ವೃತ್ತಿಗಳಲ್ಲಿ ಪ್ರತಿ ದಿನ ಬಂದೊದಗುವ ಅಪಾಯಗಳ ಬಗ್ಗೆ ಉಪನ್ಯಾಸ ನೀಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಉದ್ಯೋಗಿಗಳಿಗೆ ತಾವು ಎದುರಿಸುತ್ತಿರುವ ಅಪಾಯಗಳ ಅರಿವೇ ಇಲ್ಲದೆ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತಿದೆ ಹಾಗೂ ಆ ತೊಂದರೆಗಳನ್ನು ಹೇಗೆ ಕಂಡುಹಿಡಿದು, ಅವುಗಳ ಪರಿಹಾರದ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರಿನ ಸೆಂಟ್ ಜಾನ್ಸ್ ವೈದ್ಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬಾಬ್ಬಿ ಜೋಸೆಫ್ ವೈದ್ಯಕೀಯ ಕ್ಷೇತ್ರಗಳಲ್ಲಿ ಬಂದೊದಗುವ ಅಪಾಯಗಳನ್ನು ಹೇಗೆ ಗುರುತಿಸುವದು ಮತ್ತು ಅವುಗಳನ್ನು ಪರಿಹರಿಸುವದೆಂದು ತಿಳಿಸಿದರು.
ದೆಹಲಿಯ ವಿಜ್ಞಾನಿಯಾದ ಡಾ. ಆಶಿಶ್ ಮಿತ್ತಲ್ ವೈದ್ಯಕೀಯ ಕ್ಷೇತ್ರದ ಕಟ್ಟಡಗಳು, ಪೀಠೋಪಕರಣಗಳು ಮತ್ತು ಇತರೆ ಯಂತ್ರೋಪಕರಣಗಳ ಸುರಕ್ಷತೆ ಬಗ್ಗೆ ವಿವರಿಸಿದರು. ವೈದ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ರಾಮಚಂದ್ರ ಕಾಮತ್ ವೃತ್ತಿ ಸಂಬಂಧಿ ಚರ್ಮರೋಗಗಳ ಬಗ್ಗೆ ಉಪನ್ಯಾಸ ನೀಡಿದರು. ಸಹ ಪ್ರಾಧ್ಯಾಪಕ ಡಾ. ಶರವಣನ್ ವೈದ್ಯಕೀಯ ಕ್ಷೇತ್ರದ ಕಾರ್ಯಗಳನ್ನು ದಕ್ಷತೆಯಿಂದ ಹೇಗೆ ನಿರ್ವಹಿಸುವದು ಮತ್ತು ಅಧಕ್ಷತೆಯಿಂದುಂಟಾಗುವ ಅಪಾಯಗಳನ್ನು ವಿವರಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಜ್ ವೈದ್ಯ ವೃತ್ತಿಯಲ್ಲಿರುವವರು ತೆಗೆದುಕೊಳ್ಳಬೇಕಾದ ಲಸಿಕೆಗಳ ಬಗ್ಗೆ ಉಪನ್ಯಾಸ ನೀಡಿದರು. ನ್ಯಾಯ ವೈದ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ. ಉಮೇಶ್ ಬಾಬು ಅವರು ದಿನನಿತ್ಯ ಎದುರಾಗಬಹು ದಾದಂತಹ ವೈದ್ಯವೃತ್ತಿ ಸಂಬಂಧಿ ಹಿಂಸಾತ್ಮಕ ಕೃತ್ಯಗಳು ಮತ್ತು ಅದನ್ನು ನಿಭಾಯಿಸಲು ಇರುವಂತಹ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಆಗಮಿಸಿದರು. ಕಾರ್ಯಕ್ರಮವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಬಾರ ನಿರ್ದೇಶಕ ಡಾ. ವಿಶಾಲ್ ಕುಮಾರ್ ಉದ್ಘಾಟಿಸಿದರು. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಮೇರಿ ನಾಣಯ್ಯ, ಕರ್ನಾಟಕ ವೈದ್ಯ ಪರಿಷತ್ನ ಮೇಲ್ವಿಚಾರಕರಾದ ಡಾ. ಹರೀಶ್ ಎಂ.ಕೆ., ಡಾ. ನರಸಿಂಹ, ಡಾ. ನಂದಕುಮಾರ್, ಜಗದೀಶ್ ಹಾಗೂ ಕೊಡಗು ವೈದ್ಯಕೀಯ ಕಾಲೇಜಿನ ಬೋಧಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಡಾ. ಸುಮುಖ್ ತಿಮ್ಮಯ್ಯ ನಿರೂಪಿಸಿದರು.