ಕುಶಾಲನಗರ, ಮಾ. 3: ಕುಶಾಲನಗರ ಬಳಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಘಟಕವೊಂದು ಸದ್ಯದಲ್ಲಿಯೇ ಪ್ರಾರಂಭವಾಗುವ ಮುನ್ಸೂಚನೆ ದೊರೆತಿದೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಬಸವನಹಳ್ಳಿ ವ್ಯಾಪ್ತಿಯಲ್ಲಿ ಹೆದ್ದಾರಿ ರಸ್ತೆಯ ಅಂಚಿನಲ್ಲಿ ಘಟಕಕ್ಕೆ ಅವಶ್ಯಕತೆಯಿರುವ ಭೂಮಿಯನ್ನು ಒದಗಿಸುವದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಸಾರಿಗೆ ಸಂಸ್ಥೆಯ ವಿಭಾಗಿಯ ಸಂಚಾರಿ ನಿಯಂತ್ರಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
ಕುಶಾಲನಗರ ಬಸ್ ನಿಲ್ದಾಣದ ಸಮಸ್ಯೆಗಳ ಬಗ್ಗೆ ವಿಭಾಗಿಯ ಕಚೇರಿ ಅಭಿಯಂತರರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವ ನೂತನ ಘಟಕದ ನಿರ್ಮಾಣದ ಹಿನ್ನೆಲೆ ಈಗಾಗಲೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಜಿಲ್ಲೆಯ ಮಡಿಕೇರಿ ಘಟಕದಲ್ಲಿ ಬಸ್‍ಗಳ ಸಂಖ್ಯೆ ಅಧಿಕಗೊಂಡಿದ್ದು ಇದರಿಂದ ನಿರ್ವಹಣೆಗೆ ಅನಾನುಕೂಲವಾಗುತ್ತಿದೆ. ಆ ಹಿನ್ನೆಲೆ ಗೋಣಿಕೊಪ್ಪಲು ಹಾಗೂ ಕುಶಾಲನಗರದಲ್ಲಿ ನೂತನ ಘಟಕಗಳ ನಿರ್ಮಾಣಕ್ಕೆ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಬಸವನಹಳ್ಳಿಯಲ್ಲಿ ಅಂದಾಜು 4 ಎಕರೆ ಸ್ಥಳ ಗುರುತಿಸಲಾಗಿದ್ದು, ಸದ್ಯದಲ್ಲಿಯೇ ಮುಂದಿನ ಕ್ರಮಕ್ಕೆ ಮುಂದಾಗುವದಾಗಿ ತಿಳಿಸಿದ್ದಾರೆ. ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಬಹಳ ಹಳೆಯ ಕಟ್ಟಡವಾಗಿದ್ದು, ಮೂಲಭೂತ ವ್ಯವಸ್ಥೆಯ ಕೊರತೆಯೊಂದಿಗೆ ಸಮರ್ಪಕ ಸೌಲಭ್ಯಗಳು ನೀಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದು ತಿಳಿಸಿದ್ದಾರೆ.
ಬಸ್ ನಿಲ್ದಾಣದ ಒತ್ತಿನಲ್ಲಿ ಆವರಣ ಗೋಡೆ ನಿರ್ಮಿಸಿ ನಿಲ್ದಾಣಕ್ಕೆ ಸೇರಿದ ಜಾಗವನ್ನು ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗುವದು. ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಗುವದು ಎಂದು ತಿಳಿಸಿದ್ದಾರೆ. ಯಾವದೇ ಸಂದರ್ಭ ಬಸ್ ನಿಲ್ದಾಣಕ್ಕೆ ನೀಡಿದ ಜಾಗ ಒತ್ತುವರಿಯಾಗದಂತೆ ಎಚ್ಚರವಹಿಸ ಲಾಗುವದು ಎಂದು ತಿಳಿಸಿದ್ದಾರೆ.
ಬಸ್ ನಿಲ್ದಾಣದ ಶೌಚಾಲಯ ದಿಂದ ಶೌಚ ತ್ಯಾಜ್ಯಗಳು ಚರಂಡಿ ಮೂಲಕ ಹರಿಯುತ್ತಿದ್ದ ಪ್ರಕರಣದ ಹಿನ್ನೆಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ವಿಭಾಗಿಯ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ದಿವಾಕರ್ ತಿಳಿಸಿದ್ದಾರೆ. ಮಡಿಕೇರಿ ಘಟಕದ ಅಧಿಕಾರಿಗಳು ಕುಶಾಲನಗರ ಪಟ್ಟಣ ಪಂಚಾಯಿತಿಗೆ ಶುಲ್ಕ ಪಾವತಿಸಿ ಶೌಚಾಲಯ ತ್ಯಾಜ್ಯವನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಬಸ್ ನಿಲ್ದಾಣದ ಆವರಣವನ್ನು ಸಂಪೂರ್ಣ ಸ್ವಚ್ಛ ವಾಗಿಡಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭ ಸ್ಥಳೀಯ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಥಳೀಯ ಬಸ್ ನಿಲ್ದಾಣದ ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಿದರು. ಸರಕಾರಿ ಬಸ್ ನಿಲ್ದಾಣದ ಆವರಣದ ಸುತ್ತಲೂ ಖಾಸಗಿ ಮ್ಯಾಕ್ಸಿಕ್ಯಾಬ್, ಖಾಸಗಿ ಪ್ರಯಾಣಿಕರ ಬಸ್‍ಗಳು ಇನ್ನಿತರ ವಾಹನಗಳು ನಿಲುಗಡೆಗೊಳ್ಳುತ್ತಿದ್ದು, ಇದರಿಂದ ಸಂಸ್ಥೆಯ ಆದಾಯಕ್ಕೆ ಕುತ್ತು ಉಂಟಾಗುತ್ತಿದೆ. ಬಸ್ ನಿಲ್ದಾಣದಿಂದ 200 ಮೀ. ದೂರದ ತನಕ ಯಾವದೇ ಪ್ರಯಾಣಿಕರನ್ನು ಒಯ್ಯುವ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿರುವದಾಗಿ ವಿಭಾಗಿಯ ಸಂಚಾರಿ ನಿಯಂತ್ರಣಾಧಿಕಾರಿ ವೆಂಕಟೇಶ್ ಮಾಹಿತಿ ನೀಡಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ.