ಮಡಿಕೇರಿ, ಮಾ. 3: ಕೊಡಗಿನ ದೇವಾನುದೇವತೆಗಳಿಗೆ ತಮ್ಮ ತಮ್ಮನೆಲೆ ಕಟ್ಟಿನಲ್ಲಿ ವಿಶಿಷ್ಟವಾದ ಸ್ಥಾನವಿದೆ. ಪದ್ಧತಿ-ಪರಂಪರೆಯೊಂದಿಗೆ ಅಯಾಯ ಊರಿನವರು ದೇವರ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಅಂತೆಯೇ ಕೊಡಗಿನ ಸೋಮವಾರಪೇಟೆ ತಾಲೂಕು ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವಾಲಯ ಹಾಗೂ ಇಲ್ಲಿನ ಸಂಪ್ರದಾಯ ಬಹಳ ವಿಶಿಷ್ಟತೆಯಿಂದ ಕೂಡಿದೆ.
ಚೆಟ್ಟಳ್ಳಿ ಪಟ್ಟಣದಿಂದ ಸುಂಟಿಕೊಪ್ಪಕ್ಕೆ ಹೋಗುವ ದಾರಿಯಲ್ಲಿ ಮುಂದೆ ಸಾಗಿದಂತೆ ರಸ್ತೆಯ ಎಡಭಾಗದಲ್ಲಿ ಸುಮಾರು 1.50 ಕಿ.ಮೀ. ಸಾಗಿದರೆ ಪಶ್ಚಿಮಾಭಿ ಮುಖವಾಗಿ ನಿಂತ ದೇವಾಲಯವೇ ಚೇರಳ ಶ್ರೀ ಭಗವತಿ ದೇವಾಲಯ.
ಇಲ್ಲಿನ ಚೇರಳ ಶ್ರೀ ಭಗವತಿ ದೇವರಿಗೆ ಸುಮಾರು 350 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದ್ದು ಹಿಂದಿನ ಸಂಪ್ರದಾಯದಂತೆಯೇ ಈಗಲೂ ಪೂಜಾ ಸಂಪ್ರದಾಯಗಳು, ಹಬ್ಬಹರಿದಿನಗಳನ್ನು ಊರಿನವರು ಶ್ರದ್ಧಾಭಕ್ತಿಯಿಂದ ಆಚರಿಸಿ ಕೊಂಡುಬರುತ್ತಿದ್ದಾರೆ.
ಚೇರಳದ ಊರಿನಲ್ಲಿ ಬುಟ್ಟಿನೇಯುವ ಹಾಗೂ ವಾಟೆಯಿಂದ ಕೊಡೆಗಳನ್ನು ನೇಯುವ ಕೆಲಸವನ್ನು ಮಾಡುತ್ತಿದ್ದಂತಹ ಮೇದ ಜನಾಂಗದವರು ಒಮ್ಮೆ ಕಾಡಿನಿಂದ ವಾಟೆ ತರುತ್ತಿದ್ದಾಗ ಅದರಲ್ಲಿ ಚೇರಳ ಶ್ರೀ ಭಗವತಿಯು ನೆಲೆಗಾಗಿ ಬಂದಳೆಂದು ಆ ಸಮಯದಲ್ಲಿ ವಾಟೆಯಲ್ಲಿದ್ದ ಮುಳ್ಳು ಶ್ರೀ ಭಗವತಿಯ ಮೂಗನ್ನು ಕತ್ತರಿಸಿತು. ಆದರಿಂದ ಪೂರ್ವದಲ್ಲಿ ಉದಯಿಸುವ ಸೂರ್ಯ ದೇವನಿಗೆ ತನ್ನ ಮುಖವನ್ನು ತೋರಿಸಲಾಗದೆ ಚೇರಳ ಊರಿನಲ್ಲಿ ಪಶ್ಚಿಮಾಭಿಮುಖವಾಗಿ ನೆಲೆನಿಂತಳೆಂದೂ ಈ ವಿಚಾರವನ್ನು ಮೇದ ಜನಾಂಗದವರು ಚೇರಳದ ಊರಿನ ಅಮ್ಮಕೊಡವ ಕುಟುಂಬಸ್ಥ ರಾದ ಚೇರಳತಮ್ಮಂಡ ಕುಟುಂಬ ದವರನ್ನು ಹಾಗೂ ಕೊಂಗೇಟಿರ ಕುಟುಂಬಸ್ಥರಿಗೆ ತಿಳಿಸಿದರೆನ್ನಲಾಗಿದೆ. ಅವರೆಲ್ಲ ದೇವರುನೆಲೆ ನಿಂತಲ್ಲಿಗೆ ಧಾವಿಸಿಬಂದಾಗ ದೇವರು ಊರಿನ ಒಬ್ಬರಿಗೆ ಮೈಯಲ್ಲಿ ಬಂದು ಬಲಗೈಯಲ್ಲಿ ಚೇರಳತಮ್ಮಂಡ ಕುಟುಂಬದವರನ್ನು ಎಡಗೈಯಲ್ಲಿ ಕೊಂಗೇಟಿರ ಕುಟುಂದವರನ್ನು ಹಿಡಿದು ನನಗೆ ದೇವರನೆಲೆಯನ್ನು ಮಾಡಿ ಪೂಜೆ ಪುನಸ್ಕಾರಗಳನ್ನು ಸಂಪ್ರದಾಯವಾಗಿ ನಡೆಸಿಕೊಂಡು ಬಂದುದೇ ಆದಲ್ಲಿ ನೆಲೆ ನಿಂತು ಊರಿನವರಿಗೆಲ್ಲ ಒಳ್ಳೆದನ್ನು ಮಾಡುತ್ತಾ ನಿಮ್ಮನೆಲ್ಲ ಕಾಯುತ್ತೇನೆಂದು ತಿಳಿಸಿದ ಮೇರೆಗೆ ಕುಟುಂಬಗಳು ಹಾಗೂ ಊರಿನವರು ಮುಂದೆ ನಿಂತು ದೇವರ ಕಾರ್ಯವನ್ನು ಮಾಡಲು ಸನ್ನದ್ದರಾದರೆನ್ನಲಾಗಿದೆ.
ಭಗವತಿ ದೇವಿಯ ಜೊತೆಗೆ ಇಬ್ಬರು ಸಹೋದರಿಯರು ಬಂದಿದ್ದು, ಅವರನ್ನು ಸದಾ ನೋಡುತ್ತಿರಬೇಕೆಂದು ಪಶ್ಚಿಮಾಭಿಮುಖವಾಗಿ ಅಕ್ಕ ಚೇರಳ ಭಗವತಿಯು ನೆಲೆಸಿರುವಳು ಎಂಬ ಮತ್ತೊಂದು ಕಥೆ ಇದೆ. ಈ ದೇವಾಲಯದ ಒಳಗೆ ಶ್ರೀ ಭಗವತಿ ದೇವರ ಗರ್ಭಗುಡಿ, ಮುಂದೆ ಪೀಠಮಂಟಪ, ಬಲಬದಿಯಲ್ಲಿ ಗಣಪತಿ ಗುಡಿ, ದೇವಾಲಯದ ಒಳಗೆ ನಾಗರಹುತ್ತ ಬೆಳೆದುನಿಂತಿದೆ. ದೇವಾಲಯದ ಮುಂದೆ ಬೊಳಕ್ ಮರವೆಂಬ ದೀಪದ ಕಂಬವನ್ನು ಇಡಲಾಗಿದ್ದು, ಎರಡೂ ಬದಿಗಳಲ್ಲಿ ಪವಳಿಯನ್ನು ನಿರ್ಮಿಸಲಾಗಿದೆ. ಕೊಡಗಿನಲ್ಲೇ ಅಪರೂಪವೆಂಬಂತೆ ಇಲ್ಲಿನ ಚೇರಳ ಭಗವತಿಯ ದೇವಾಲಯ ಪಶ್ಚಿಮಾಭಿಮುಖವಾಗಿ ಕಾಣಬರುತ್ತಿದೆ. ದೇವಾಲಯದ ಹಿಂದಿನ ಸಂಪ್ರದಾಯದಂತೆ ಕೊಡಗಿನ ಕುಂಬ್ಯಾರ್ ತಿಂಗಳ ಮೊದಲನೇ ವಾರ ಅಂದರೆ ಮಾರ್ಚ್ ತಿಂಗಳ ಮೊದಲನೇ ವಾರದಂದು ಚೇರಳ ಶ್ರೀ ಭಗವತಿ ದೇವರ ಹಬ್ಬವನ್ನು ಹಿಂದಿನಿಂದಲೇ ಸಂಪ್ರದಾಯ ಬದ್ದವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ದೇವಾಲಯದ ಪಟ್ಟಣಿ ಹಬ್ಬ ನಿನ್ನೆ ಆರಂಭಗೊಂಡಿದ್ದು, ತಾ. 4 ರಂದು (ಇಂದು) ಅಯ್ಯಪ್ಪ ದೇವರಬನ ಊರಿನವರು ಅಯ್ಯಪ್ಪ ದೇವರಬನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯಕ್ಕೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವರು ಅಲ್ಲಿಗೆ ದೇವರ ಕಟ್ಟು ಮುಗಿಯುವದು. ತಾ. 5 ರಂದು ಮಧ್ಯಾಹ್ನ ಚೇರಳ ಶ್ರೀ ಭಗವತಿ ದೇವರ ದೊಡ್ಡ ಹಬ್ಬವಾಗಿದ್ದು, ಅಂದು ಬಿಳಿಕುಪ್ಪಸದಟ್ಟಿಯನ್ನು ತೊಟ್ಟಂತ ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರ ಮನೆಯಾದ ಚೇರಳತಮ್ಮಂಡ ಆನಂದರವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ದೇವಾಲಯದ ವಾರ್ಷಿಕೋತ್ಸವದ ವಿಧಿü ವಿಧಾನಗಳನ್ನು ಸಂಪ್ರದಾಯ ಬದ್ಧವಾಗಿ ಪೂಜೆಪುನಸ್ಕಾರವನ್ನೆಲ್ಲ ಮಾಡಿ ನೆಂಟರಿಷ್ಟರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗುವದು. ಬಿಳಿಕುಪ್ಪಸ ದಟ್ಟಿಯನ್ನು ಧರಿಸಿದ ಊರಿನವರು ದೇವರ ನಡೆಗೆಬಂದು ದೇವಾಲಯದಲ್ಲಿ ಇಟ್ಟಂತ ಕೊಂಬನ್ನು ಹಿಡಿದು ಬೊಳಕ್ ಮರದ ಮುಂದೆ ಸಾಲಾಗಿ ಬಂದು 18 ತರಹದ ವಿಶೇಷಕರವಾದ ಕೊಂಬಾಟ್ ನೃತ್ಯವನ್ನು ಮಾಡುವರು ಆಂದು ದೇವರ ಹಬ್ಬಕ್ಕೆ ಬಂದಂತ ಊರಿನವರು, ನೆಂಟರಿಷ್ಟರು, ಮದುವೆಯಾಗಿ ಹೋದ ಆ ಊರಿನ ಹೆಣ್ಣು ಮಕ್ಕಳು, ಹರಕೆ ಹೊತ್ತವರು ದೇವರಿಗೆ ಭಂಡಾರವನ್ನು ಹಾಕಿ ದೇವರ ಆಶೀರ್ವಾದವನ್ನು ಪಡೆದು ದೇವರ ಪ್ರಸಾದ ಊಟೋಪಚಾರ ದೊಂದಿಗೆ ತೆರಳುತ್ತಾರೆ.
ಈ ದೇವಾಲಯದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಭಗವತಿ, ಅಯ್ಯಪ್ಪ, ಚಾಮುಂಡಿ ದೇವರುಗಳಿಗೆ 5 ಮೂರ್ತಿ ಕೋಲ(ತೆರೆ)ವನ್ನು ನಡೆಸುವ ಸಂಪ್ರದಾಯವಿದೆ.
- ಪುತ್ತರಿರ ಕರುಣ್ ಕಾಳಯ್ಯ