ಸೋಮವಾರಪೇಟೆ, ಮಾ. 3: ಕಳೆದ 2009ರಲ್ಲಿ ಡಾಮರು ಕಂಡಿದ್ದ ರಸ್ತೆ ಇದುವರೆಗೂ ನಿರ್ವಹಣೆ ಗೊಂಡಿರಲಿಲ್ಲ. ಕೆಲ ವರ್ಷಗಳ ಹಿಂದೆ ರಸ್ತೆಯಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಗುಂಡಿಗಳು ತನ್ನ ಗಾತ್ರವನ್ನು ಹಿಗ್ಗಿಸಿ ಕೊಂಡಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿರಲಿಲ್ಲ. ಇತ್ತೀಚೆಗಂತೂ ರಸ್ತೆಯ ಗುಂಡಿಗಳು ಇನ್ನಷ್ಟು ಹಿಗ್ಗಿ ಬೃಹತ್ ಹೊಂಡ ವಾದರೂ ಯಾರೂ ಗಮನಹರಿಸಿ ರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ರಜಾದಿನದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಜನಪ್ರತಿನಿಧಿಗಳು-ಅಧಿಕಾರಿಗಳ ಕಾಳಜಿಯ ಬಗ್ಗೆ ಪ್ರಶ್ನೆ ಹಾಕಿದ್ದಾರೆ.

ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಅರಣ್ಯ ರಕ್ಷಕರ ವಸತಿ ಗೃಹದಿಂದ ಹಾರಂಗಿ ಸಂಪರ್ಕಿಸುವ 5 ಕಿ.ಮೀ. ರಸ್ತೆಯನ್ನು ಕಳೆದ 2009ರಲ್ಲಿ ಕೊಡಗು ಮಂಗಳೂರು ಲೋಕಸಭಾ ಸದಸ್ಯರಾಗಿದ್ದ ಡಿ.ವಿ. ಸದಾನಂದಗೌಡ ಅವರ ಕಾಳಜಿಯ ಮೇರೆ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ರೂ.165.525ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಇತ್ತೀಚೆಗೆ ತೀರಾ ದುಸ್ಥಿತಿಗೆ ತಲುಪಿತ್ತು.

ಗುತ್ತಿಗೆದಾರರ ನಿರ್ವಹಣಾ ಅವಧಿ ಮುಕ್ತಾಯವಾಗಿದ್ದರಿಂದ ಈ ರಸ್ತೆಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಸಣ್ಣಪುಟ್ಟ ಗುಂಡಿಗಳು ದೊಡ್ಡದಾದ್ದರಿಂದ ವಾಹನ ಸಂಚಾರವೂ ದುಸ್ತರವಾಗಿತ್ತು. ದಿನಂಪ್ರತಿ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದರು.

ಗುಂಡಿಬಿದ್ದಿದ್ದ ರಸ್ತೆಯನ್ನು ‘ದೊಡ್ಡವರೆನಿಸಿಕೊಂಡವರು’ ಸರಿಪಡಿಸುತ್ತಾರೆ ಎಂದು ಹಲವು ವರ್ಷಗಳಿಂದ ಕಾಯುತ್ತಿದ್ದರೂ ಯಾರೂ ಇತ್ತ ಗಮನಹರಿಸಲಿಲ್ಲ. ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿ ವರ್ಗದವರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿಗಳು ಶಾಲಾ ರಜಾ ದಿನದಂದು ಪಿಕಾಸಿ, ಗುದ್ದಲಿ ಹಿಡಿದು ರಸ್ತೆಗಿಳಿದರು. ಗುಂಡಿಬಿದ್ದಿದ್ದ ಸ್ಥಳಗಳಿಗೆ ಮಣ್ಣು ತುಂಬಿ ರಸ್ತೆ ಸರಿಪಡಿಸಿದರು.

ಕಾಜೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಆದರ್ಶ್, 5ನೇ ತರಗತಿಯ ಸುಮಂತ್, ಐಗೂರು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆದರ್ಶ್, ಸಂತ ಜೋಸೆಫರ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶರತ್, ದೀಕ್ಷಿತ್, 9ನೇ ತರಗತಿಯ ಸಚಿನ್, ರಕ್ಷಿತ್ ಅವರುಗಳೊಂದಿಗೆ ಐಗೂರು ಗ್ರಾಮದ ಆಟೋ ಚಾಲಕರುಗಳಾದ ವಿನೋದ್ ಮತ್ತು ಅನಿಲ್ ಅವರುಗಳು ಸುಮಾರು 4 ಕಿ.ಮೀ. ರಸ್ತೆಯಲ್ಲಿದ್ದ ಬೃಹತ್ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕ ರಿಂದ ಪ್ರಶಂಸೆಗೆ ಒಳಗಾದರು.

ಅಂದ ಹಾಗೆ ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ನಾವೇ ಮುಚ್ಚಿಸಿದ್ದು ಎಂದು ಸಂಬಂಧಿಸಿದ ಇಲಾಖೆಯಿಂದ ಯಾರಾದರೂ ಮಹಾನುಭಾವರು ಬಿಲ್ ಮಾಡಿಸಿಕೊಂಡಾರು? ಎಚ್ಚರ!

-ವಿಜಯ್ ಹಾನಗಲ್