ಕುಶಾಲನಗರ, ಮಾ. 3: ಗುರು-ಹಿರಿಯರು ನೀಡುವ ಮಾರ್ಗ ದರ್ಶನವನ್ನು ಪಡೆದುಕೊಂಡು ನಾಯಕತ್ವ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವೆಂದು ಕುಶಾಲನಗರದ ಉದ್ಯಮಿ ಎಂ.ಎ. ರಘು ತಿಳಿಸಿದರು.
ಚಿಕ್ಕಅಳುವಾರದಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಭವ್-2017 ವಾಣಿಜ್ಯ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ವಾಣಿಜ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವೈ. ಮುನಿಸ್ವಾಮಿ ಮಾತನಾಡಿ, ಮೌಲ್ಯಯುತ ಚಿಂತನೆ, ನಿರ್ಧಾರ ತೆಗೆದುಕೊಳ್ಳುವದು ವಿದ್ಯಾರ್ಥಿ ಬದುಕಿನಲ್ಲಿ ಬಹು ಮುಖ್ಯವಾದ ಅಂಶವಾಗಿದೆ ಎಂದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಅಧ್ಯಯನ ವಿಭಾಗದ ಉಪನ್ಯಾಸಕರುಗಳಾದ ಮೊಹಮ್ಮದ್ ಇರ್ಷಾದ್, ಸಂಗೀತ ಎಂ. ಬಿದ್ದಪ್ಪ, ಮೇಕಂಡ ಪಿ. ಗೀತಾಂಜಲಿ, ಪ್ರಸನ್ನ, ವಾಣಿಜ್ಯ ಸಂಘದ ಅಧ್ಯಕ್ಷ ಜೆ. ದುರ್ಗೇಶ್, ಉಪಾಧ್ಯಕ್ಷ ರಾಜೇಶ್, ಬೋಧಕ ವೃಂದ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಾಯತ್ರಿ ನಿರೂಪಿಸಿ, ಅಕಿಲಾ ಪ್ರಾರ್ಥಿಸಿದರು.