ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣ ಧ್ವಜ ಹಾರಾಟ

ಅಮೃತಸರ್, ಮಾ.6 : ಪಂಜಾಬ್ ನ ಅಮೃತಸರ್ ಸಮೀಪದ ಭಾರತ್ ಮತ್ತು ಪಾಕ್ ಗಡಿಭಾಗದ ಅಟ್ಟಾರಿಯಲ್ಲಿ ಭಾರತದ ಅತ್ಯಂತ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದೆ. 120 ಅಡಿ ಉದ್ದ, 80 ಅಡಿ ಅಗಲದ ಬೃಹತ್ ತ್ರಿವರ್ಣ ಧ್ವಜವನ್ನು ಬರೋಬ್ಬರಿ 360 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಹಾರಿಸಲಾಗಿದೆ. ಭಾರತದ ಈ ತ್ರಿವರ್ಣ ಧ್ವಜ ಎಷ್ಟು ಎತ್ತರವಾಗಿದೆ ಅಂದರೆ ಪಾಕಿಸ್ತಾನದ ಹೃದಯಭಾಗವಾದ ಲಾಹೋರ್ ನಗರದ ಜನಪ್ರಿಯ ಅನಾರ್ಕಲಿ ಬಜಾರ್ ನಿಂದಲೂ ನೋಡಬಹುದಾಗಿದೆ. ಅತೀ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರುವುದರಿಂದ ಗಾಳಿಯ ಹೊಡೆತಕ್ಕೆ ಸಿಲುಕಿ ಹರಿದು ಹೋಗದಿರಲಿ ಎಂಬ ಮುನ್ನೆಚ್ಚರಿಕೆಯಿಂದಾಗಿ ಧ್ವಜವನ್ನು ಪ್ಯಾರಾಚೂಟ್ ಮೆಟಿರಿಯಲ್ ನಿಂದ ನಿರ್ಮಿಸಲಾಗಿದ್ದು, ಇದು ಸುಮಾರು 100 ಕೆಜಿಯಷ್ಟು ತೂಕವಿದೆ. 360 ಅಡಿ ಎತ್ತರದ ಧ್ವಜಸ್ತಂಭ 55 ಟನ್ ತೂಕವಿದೆ. ಇದು ದೆಹಲಿಯ ಪ್ರಸಿದ್ಧ ಕುತುಬ್ ಮಿನಾರ್ ಗಿಂತಲೂ ಎತ್ತರವಿದೆ. ಈ ಧ್ವಜ ಹಾಗೂ ಧ್ವಜಸ್ತಂಭದ ನಿರ್ಮಾಣಕ್ಕಾಗಿ ತಗುಲಿದ ವೆಚ್ಚ 4 ಕೋಟಿ ರೂಪಾಯಿ. ಧ್ವಜ ಕೆಲಸದ ಕಾರ್ಯವನ್ನು ಅಮೃತಸರ್ ಇಂಪ್ರೂಮೆಂಟ್ ಟ್ರಸ್ಟ್ ಪೂರ್ಣಗೊಳಿಸಿರುವುದಾಗಿ ವರದಿ ವಿವರಿಸಿದೆ.

ಮುಂಬೈ ಮೇಲಿನ ದಾಳಿಯನ್ನು ಒಪ್ಪಿಕೊಂಡ ಪಾಕ್

ಇಸ್ಲಾಮಾಬಾದ್, ಮಾ.6 : 2008ರ ನ.26ರಂದು ಮುಂಬೈ ಮೇಲೆ ನಡೆದ ಭೀಕರ ಉಗ್ರದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿಗಳೇ ನಡೆಸಿದ್ದು ಎಂದು ಪಾಕಿಸ್ತಾನ ಮಾಜಿ ಭದ್ರತಾ ಸಲಹೆಗಾರ ಜನರಲ್ ಮಹಮುದ್ ಅಲಿ ದುರಾನಿ ಹೇಳಿದ್ದಾರೆ. ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ ಕೇಂದ್ರದಲ್ಲಿ ನಡೆಯುತ್ತಿರುವ 19ನೇ ಏಷ್ಯಾ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಮಹಮುದ್ ಅಲಿ ದುರಾನಿ, 2008ರ ನವೆಂಬರ್ 26ರಂದು ನಡೆದ ಮುಂಬೈ ಮೇಲೆ ನಡೆದ ಉಗ್ರ ದಾಳಿ ಪಾಕಿಸ್ತಾನ ಮೂಲದ ಉಗ್ರರಿಂದ ನಡೆದಿದ್ದು, ಇದೊಂದು ಸಾಂಪ್ರದಾಯಿಕ ಗಡಿಯಾಚೆಗಿನ ಭಯೋತ್ಪಾದನೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಮಾಜಿ ಸಲಹೆಗಾರರೊಬ್ಬರು ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಉಗ್ರರ ಕೈವಾಡದ ಕುರಿತು ಮಾತನಾಡಿರುವುದು ಇದೇ ಮೊದಲಾಗಿದ್ದು, ದುರಾನಿ ಹೇಳಿಕೆ ಇದೀಗ ಪಾಕಿಸ್ತಾನ ಸರ್ಕಾರದ ಮುಜುಗರಕ್ಕೆ ಕಾರಣವಾಗಿದೆ.

ಶೇ.58 ರಷ್ಟು ಭಾರತೀಯ ಮಕ್ಕಳಲ್ಲಿ ರಕ್ತ ಹೀನತೆ

ನವದೆಹಲಿ, ಮಾ.6 : ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಲ್ಲಿ ಶೇ. 58 ಕ್ಕಿಂತಲೂ ಹೆಚ್ಚಿನವರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.ಮಕ್ಕಳ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದು, ಅವರು ಸುಲಭವಾಗಿ ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ. ಶೇ. 38 ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದರೆ, ಶೇ. 21 ರಷ್ಟು ಮಕ್ಕಳು ಅಶಕ್ತಿಯಿಂದ ಬಳಲುತ್ತಿದ್ದಾರೆ ಮತ್ತು ಶೇ. 36 ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ ಎಂಬ ಆಘಾತಕಾರಿ ಮಾಹಿತಿ 2015-16ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಬಹಿರಂಗ ಗೊಂಡಿದೆ.2005-06ರ ಸಮೀಕ್ಷೆಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿಲ್ಲ. 2011ರ ಜನಗಣತಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಸುಮಾರು 7.2 ಕೋಟಿ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, 5 ಕೋಟಿ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಜತೆಗೆ 2.6 ಕೋಟಿ ಮಕ್ಕಳು ಅಶಕ್ತರಾಗಿದ್ದು, 4.4 ಕೋಟಿ ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ ಎಂದು ದಶಕದ ನಂತರ ಬಿಡುಗಡೆಯಾಗಿರುವ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಗರ್ಭಿಣಿಯರು ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ವರದಿ ತಿಳಿಸಿದೆ.

ಖಾತೆಯಲ್ಲಿ ಕನಿಷ್ಠ ಹಣ ಇಲ್ಲದಿದ್ದರೆ ದಂಡ

ನವದೆಹಲಿ, ಮಾ.6 : ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಏ.1ರಿಂದ ದಂಡ ಹೇರುವ ಪ್ರಕ್ರಿಯೆಯನ್ನು ಮತ್ತೆ ಜಾರಿಗೆ ತರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಅಲ್ಲದೆ ಎಟಿಎಂ ಸೇರಿದಂತೆ ಇತರ ಸೇವೆಗಳಿಗೆ ವಿಧಿಸುವ ದರಗಳನ್ನು ಪರಿಷ್ಕರಿಸಲಿದೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವವರಿಗೆ ಹಣವನ್ನು ತಿಂಗಳಲ್ಲಿ ಮೂರು ಸಲದವರೆಗೆ ಯಾವುದೇ ಶುಲ್ಕವಿಲ್ಲದೆ ಠೇವಣಿಯಿಡಲು ಅವಕಾಶ ನೀಡಲಾಗಿದ್ದು, ಅದಕ್ಕಿಂತ ಹೆಚ್ಚಿನ ಸಾರಿ ಠೇವಣಿಯಿಟ್ಟರೆ 50 ರೂಪಾಯಿ ಹಾಗೂ ಸೇವಾ ಶುಲ್ಕವನ್ನು ವಿಧಿಸಲಿದೆ. ಚಾಲ್ತಿ ಖಾತೆ ಹೊಂದಿರುವವರಿಗೆ ದಂಡದ ಮೊತ್ತ 20,000ದವರೆಗೂ ಏರಿಕೆಯಾಗಬಹುದು. ಎಸ್ ಬಿಐಯ ಪರಿಷ್ಕೃತ ದರದ ಪ್ರಕಾರ, ತಿಂಗಳ ಸರಾಸರಿ ಕನಿಷ್ಠ ಹಣವನ್ನು ಖಾತೆಯಲ್ಲಿ ಇಟ್ಟುಕೊಳ್ಳದಿದ್ದರೆ 100ರೂಪಾಯಿ ಹಾಗೂ ಸೇವಾ ಶುಲ್ಕವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಮೆಟ್ರೊಪೆÇಲಿಟನ್ ನಗರಗಳಲ್ಲಿ ಸರಾಸರಿ ಕನಿಷ್ಠ ಠೇವಣಿ ಶೇಕಡಾ 75 ಕ್ಕಿಂತ ಕಡಿಮೆಯಿದ್ದರೆ ದಂಡದ ಮೊತ್ತ 100 ರೂಪಾಯಿಯಿಂದ 5,000ದವರೆಗೆ ಏರಿಕೆಯಾಗಬಹುದು. ಶೇಕಡಾ 50ಕ್ಕಿಂತ ಕಡಿಮೆಯಿದ್ದರೆ ಬ್ಯಾಂಕು 50ರೂಪಾಯಿ ಮತ್ತು ಸೇವಾ ಶುಲ್ಕವನ್ನು ಹೇರುತ್ತದೆ. ಬ್ಯಾಂಕು ಇರುವ ಸ್ಥಳವನ್ನು ಆಧರಿಸಿ ದಂಡ ಶುಲ್ಕ ಮತ್ತು ಕನಿಷ್ಠ ಸರಾಸರಿ ಬ್ಯಾಲೆನ್ಸ್ ಬದಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದಂಡದ ಮೊತ್ತ ಕಡಿಮೆಯಿರುತ್ತದೆ.

ಮೂವರು ಯುವಕರ ಸಾವು

ಚಿಕ್ಕಬಳ್ಳಾಪುರ, ಮಾ.6 : ಚಾಲಕನ ನಿಯಂತ್ರಣ ತಪ್ಪಿದ ಪಲ್ಸರ್ ಬೈಕ್ ಕೆಳಗೆ ಬಿದ್ದು, ಕಬ್ಬಿಣದ ಸರಳುಗಳು ಚುಚ್ಚಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಐಮರೆಡ್ಡಿಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ಮುರಳಿ, ಭಾರ್ಗವ್ ಹಾಗೂ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಮೂಲತಃ ಆಂಧ್ರದ ಚಿಲಮತ್ತೂರು ಜಿಲ್ಲೆಯ ಮದನಪಲ್ಲಿ ಬಳಿಯ ಗಾಜುವಾರಲಪಲ್ಲಿ ನಿವಾಸಿಗಳು. ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಐಮರೆಡ್ಡಿಹಳ್ಳಿ ರೈಲ್ವೆ ಅಂಡರ್ ಪಾಸ್ ಕೆಳಗೆ ಅಪಘಾತವಾಗಿದ್ದು, ಸೇತುವೆ ಕೆಳಗಿನ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸಿಮೆಂಟ್ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿತ್ತು. ಹೀಗಾಗಿ ರಸ್ತೆಯ ಅರ್ಧ ಭಾಗ ಮಾತ್ರ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು ಉಳಿದ ಅರ್ಧ ಭಾಗದ ರಸ್ತೆ ಮಾಡಲಾಗಿರಲಿಲ್ಲ. ಇದ್ರಿಂದ ಪಲ್ಸರ್ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಘಟನೆಯಲ್ಲಿ ಸಿಮೆಂಟ್ ರಸ್ತೆಯ ಕಾಂಕ್ರೀಟ್ ಗೆ ಹಾಕಲಾಗಿದ್ದ ಭಾರಿ ಗಾತ್ರದ ಕಬ್ಬಿಣದ ಸರಳುಗಳು ಯುವಕರಿಗೆ ಚುಚ್ಚಿ ಸಾವನ್ನಪ್ಪಿದ್ದಾರೆ.

ಸೆಲ್ಫಿ ತೆಗೆಯುತ್ತಿದ್ದ ವ್ಯಕ್ತಿ ಸಾವು

ಪಣಜಿ, ಮಾ.6: ಅಪಾಯಕಾರಿಯಾಗಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಬಲಿಯಾಗುತ್ತಿರುವವರ ಸಂಖ್ಯೆ ಈಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇಲ್ಲಿಗೆ ಸಮೀಪದ ದಾವೋಜಿ ಗ್ರಾಮದಲ್ಲಿ 25ರ ಹರೆಯದ ವ್ಯಕ್ತಿಯೋರ್ವ ರೈಲಿನ ಹಳಿಯ ಮೇಲೆ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳುವಾಗ ಧಾವಿಸಿ ಬಂದ ರೈಲು ಬಡಿದು ಮೃತಪಟ್ಟಿದ್ದಾನೆ. ಸಚಿನ್ ಕುಂಡೇಕರ್ ಎಂಬಾತ ಇಲ್ಲಿಂದ 10 ಕಿ.ಮೀ. ದೂರದಲ್ಲಿರುವ ಕರ್ಮಾಲಿ ಸ್ಟೇಷನ್‍ನಲ್ಲಿ ರೈಲಿನ ಹಳಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.