ವೀರಾಜಪೇಟೆ, ಮಾ.6: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮಸ್ಥರಿಗೆ ಸೇವೆ ಸಲ್ಲಿಸಲು ಗ್ರಾಮ ಪಂಚಾಯಿತಿಗಳಿಗೆ ಆಧುನಿಕ ಕಟ್ಟಡಗಳ ಸೌಲಭ್ಯದ ಅಗತ್ಯವಿದೆ. ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ಆಧುನಿಕ ಕಟ್ಟಡ ಸಂಕೀರ್ಣಕ್ಕೆ ಯೋಜನೆ ಹಾಕಿಕೊಂಡಿರುವದು ಗ್ರಾಮಸ್ಥರಿಗೆ ಅಗತ್ಯ ಸೌಲಭ್ಯಗಳಲ್ಲಿ ಒಂದಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯ ವತಿಯಿಂದ ಕೈಗೊಂಡಿರುವ ರೂ 3.75 ಕೋಟಿ ವೆಚ್ಚದ ಕಟ್ಟಡ ಸಂಕೀರ್ಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬೋಪಯ್ಯ ಅವರು ಕಾರ್ಮಾಡು ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು 90ಸೆಂಟು ಖಾಲಿ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಚೇರಿ, ಸಮುದಾಯ ಭವನ ಹಾಗೂ ವಾಣಿಜ್ಯ ಸಂಕೀರ್ಣಕ್ಕೆ ಯೋಜನೆ ಹಾಕಿಕೊಂಡಿರುವದು ಪಂಚಾಯಿತಿಯ ಉತ್ತಮ ಕೆಲಸವಾಗಿದೆ. ಗ್ರಾಮ ಪಂಚಾಯಿತಿ ಗಳು ಆದಾಯವನ್ನು ಕ್ರೊಢೀಕರಿಸಿ ಪಂಚಾಯಿತಿಗಳ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ರೂ. 50ಲಕ್ಷ ಅನುದಾನ ಇದೇ ಸಂದರ್ಭದಲ್ಲಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅವರು ಮಾರುಕಟ್ಟೆ ಸಮಿತಿಯಿಂದ ಕಾರ್ಮಾಡು ಗ್ರಾಮ ಪಂಚಾಯಿತಿಯ ಈ ಯೋಜನೆಗೆ ರೂ. 50ಲಕ್ಷ ಅನುದಾನ ನೀಡುವದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಪಂಚಾಯಿತಿ ಅಧ್ಯಕ್ಷೆ ಅಕ್ಕಚೀರ ರೋನ ಭೀಮಯ್ಯ, ಜಿಲ್ಲಾ ಪಂಚಾಯಿತಿಯ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯೆ ಎಚ್.ಎಸ್. ಶೋಭ ಶ್ರೀನಿವಾಸ್ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್, ಪಂಚಾಯಿತಿ ಉಪಾಧ್ಯಕ್ಷೆ ಬಡುವಮಂಡ ಎನ್ ಸುನೀತ, ಸದಸ್ಯರುಗಳಾದ ಮಾಚಿಮಂಡ ಸುರೇಶ್ ಅಯ್ಯಪ್ಪ, ಮುಕ್ಕಾಟೀರ ಸಂತೋಷ್, ಸಿ.ಪಿ.ಸಮೀರ, ಕೆ.ಎಂ.ಹಂಸ, ಸರೋಜಿನಿ ಮಂಜುನಾಥ್, ಎಚ್.ವಿ.ಜಯ, ಕೆ.ನಿರನ್ ನಾಣಯ್ಯ, ವಿ.ಎನ್.ಸುರೇಶ್, ಎರವರ ಬೇಬಿ ಹಾಗೂ ಅಭಿವೃದ್ಧಿ ಅಧಿಕಾರಿ ರವಿ ತಮ್ಮಯ್ಯ ಉಪಸ್ಥಿತರಿದ್ದರು.