ಸೋಮವಾರಪೇಟೆ, ಮಾ. 6: ಹೆಣ್ಣಾಗಿ ಹುಟ್ಟಿದಕ್ಕೆ ಪ್ರತಿಯೊಬ್ಬರೂ ಹೆಮ್ಮೆಪಡಬೇಕು. ನೋವು ಪ್ರತಿಯೊಬ್ಬರನ್ನು ಹಿಂಬಾಲಿಸುತ್ತದೆ. ನೋವಿನೊಟ್ಟಿಗೆ ಜೀವನ ಮಾಡುವ ಶೈಲಿಯನ್ನು ಎಲ್ಲರೂ ಬೆಳೆಸಿಕೊಳ್ಳ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಡಾ. ಅರ್ಪಿತಾ ಪ್ರತಾಪ್ ಸಿಂಹ ಹೇಳಿದರು.ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಆಶ್ರಯದಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಶೇ.85 ರಷ್ಟು ಮಹಿಳೆಯರು ಒತ್ತಡದಿಂದ ಬದುಕುತ್ತಿದ್ದಾರೆ ಎಂದು ಸಮೀಕ್ಷೆ ಯೊಂದರ ವರದಿ ತಿಳಿಸಿದೆ. ಮಹಿಳೆಯರು ಒತ್ತಡ ಮುಕ್ತ ಬದುಕಿಗೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಉದ್ಘಾಟಿಸಿ ಮಾತನಾಡಿ, ಮಹಿಳಾ ವೇದಿಕೆಯ ವತಿಯಿಂದ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ, ಉತ್ತಮ ವಾಗಿ ನಿರ್ವಹಣೆ ಮಾಡುತ್ತಿರುವದು ಶ್ಲಾಘನೀಯ ಎಂದರು.

ಪ್ರಗತಿ ಪರ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಶಾಲಾ ಮುಖ್ಯಸ್ಥೆ ಕವಿತಾ ವಿರೂಪಾಕ್ಷ, ಖಚಾಂಚಿ ಲಾವಣ್ಯ ಮೋಹನ್, ಮಾಜಿ ಕಾರ್ಯದರ್ಶಿ ಪುಷ್ಪ ಸುರೇಶ್ ವೇದಿಕೆಯಲ್ಲಿದ್ದರು.

ಪ್ರಗತಿಪರ ಸಾವಯವ ಕೃಷಿಕರೂ ಆಗಿರುವ ಹಿರಿಕರ ಗ್ರಾಮದ ಪ್ರಮೀಳಾ ಚನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯ ಮೋಹನ್, ಕೆ.ಡಿ.ಚಂದ್ರಕಲಾ, ಮತಿ ಧರ್ಮಪ್ಪ ಹಾಗೂ ಮಮತ ತಂಡದವರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳೆಯರ ಸುಗ್ಗಿಕುಣಿತ ಮನರಂಜಿಸಿತು. ಯುನಿಕಿಡ್ಸ್ ಶಾಲೆಯ ಮಕ್ಕಳು ನೃತ್ಯ ಪ್ರದರ್ಶಿಸಿದರು.