ಮಡಿಕೇರಿ, ಮಾ. 5: ಭಾರತದಲ್ಲಿ ಏಕರೂಪ ಯೋಜನೆಯಡಿ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಜಾರಿಗೆ ಕೇಂದ್ರ ಸರಕಾರ ನಿರ್ಧರಿಸಿದ್ದು, ಈ ಬಗ್ಗೆ ವ್ಯಾಪಾರೋದ್ಯಮಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಚೇಂಬರ್ ಆಫ್ ಕಾಮರ್ಸ್‍ನಂತಹ ಸಂಸ್ಥೆಗಳು ಮಾಡಬೇಕೆಂದು ಕೇಂದ್ರ ಸೀಮಾ - ಸರಕು ಸಾಗಾಣೆ ತೆರಿಗೆ ಇಲಾಖೆಯ ಅಧಿಕಾರಿಗಳು ಕರೆ ನೀಡಿದ್ದಾರೆ.

ಕಾರ್ಯನಿಮಿತ್ತ ಮಡಿಕೇರಿಗೆ ಭೇಟಿ ನೀಡಿದ್ದ ಅಧಿಕಾರಿಗಳಾದ ಬೆಂಗಳೂರು ವಲಯ ಆಯುಕ್ತ ಎಂ. ವಿನೋದ್ ಕುಮಾರ್ ಹಾಗೂ ಮೈಸೂರು ವಲಯ ಆಯುಕ್ತ ಎಸ್. ರಾಜ್‍ಕುಮಾರ್ ಅವರುಗಳು, ವಾಣಿಜ್ಯೋದ್ಯಮಿಗಳೊಂದಿಗೆ ಈ ಕುರಿತು ಸಮಾಲೋಚಿಸಿದರು.

ವಾರ್ಷಿಕ ರೂ. 20 ಲಕ್ಷದೊಳಗಿನ ವಹಿವಾಟು ನಡೆಸುವವರು ಜಿ.ಎಸ್.ಟಿ.ಗೆ ಒಳಪಡುವದಿಲ್ಲವೆಂದು ಸ್ಪಷ್ಟಪಡಿಸಿದ ಅಧಿಕಾರಿಗಳು, ಉದ್ಯಮಗಳಿಂದ ಗಳಿಸುವ ವಾರ್ಷಿಕ ಒಟ್ಟಾರೆ ಆದಾಯ ರೂ. 20 ಲಕ್ಷ ಮೀರಿದರೆ ಮಾತ್ರ ತೆರಿಗೆ ವ್ಯವಸ್ಥೆಗೆ ಒಳಪಡಬೇಕೆಂದು ಮನವರಿಕೆ ಮಾಡಿದರು.

ಕೇಂದ್ರ ಸರಕು ಮತ್ತು ಸೇವಾ ಶುಲ್ಕ ಮಂಡಳಿಯು ಈಗಾಗಲೇ ಅಂತಿಮ ಕರಡು ಅನುಮೋದಿಸಿದ್ದು, ಜುಲೈನಿಂದ ಜಾರಿಯಾಗಲಿರುವ ಈ ಕಾನೂನು ರಾಜ್ಯ ರಾಜ್ಯಗಳ ನಡುವಿನ ಗೊಂದಲ ನಿವಾರಣೆಯೊಂದಿಗೆ ಇಡೀ ದೇಶಕ್ಕೆ ಒಂದೇ ರೀತಿ ತೆರಿಗೆ ಶುಲ್ಕ ಪಾವತಿಗೆ ಒತ್ತು ನೀಡಲಿರುವದಾಗಿ ವಿವರಿಸಿದರು.

ಪ್ರಸಕ್ತ ತಿಂಗಳಲ್ಲಿ ನಡೆಯಲಿರುವ ಕೇಂದ್ರ ಸಂಸತ್‍ನಲ್ಲಿ ಜಿಎಸ್‍ಟಿ ನೀತಿ ಜಾರಿಗೆ ಅಂತಿಮ ಮುದ್ರೆಯೊಂದಿಗೆ, ಜುಲೈ 1ರಿಂದ ಜಾರಿಗೊಳ್ಳಲಿದೆ. ಈ ಯೋಜನೆಯಿಂದ ಕೃಷಿ ಚಟುವಟಿಕೆ ಅಥವಾ ಆಹಾರ ಉತ್ಪನ್ನಗಳ ವಹಿವಾಟಿಗೆ ಯಾವದೇ ಶುಲ್ಕ ಅನ್ವಯಿಸುವದಿಲ್ಲವೆಂದು ಅವರುಗಳು ಸಮಜಾಯಿಷಿಕೆ ನೀಡಿದರು.

ಕೇಂದ್ರ ಕರಡು ನೀತಿ ಜಾರಿಗೊಂಡ ಬಳಿಕವಷ್ಟೇ ಜಿ.ಎಸ್.ಟಿ.ಯು ಶೇ. 5, 12, 18 ಹಾಗೂ 28ರ ಶ್ರೇಣಿಯೊಂದಿಗೆ ನಾಲ್ಕು ರೀತಿಯ ತೆರಿಗೆ ದರ ನಿರ್ಧಾರ ವಾಗಲಿದ್ದು, ರೂ. 20 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವವರು ಜಿ.ಎಸ್.ಟಿ. ನೋಂದಣಿ

(ಮೊದಲ ಪುಟದಿಂದ) ಮಾಡಿಸುವ ಅಗತ್ಯವಿಲ್ಲ ಎಂದರು.

ಯಾವದೇ ವ್ಯಾಪಾರೋದ್ಯಮ ಹಾಗೂ ವಹಿವಾಟು ಮಾಡುವವರು ಮತ್ತು ಗ್ರಾಹಕ ವಲಯಕ್ಕೆ ಹೊರೆಯಾಗದಂತೆ ಭಾರತದ ಏಕತೆಯನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರಕಾರ ಜಿ.ಎಸ್.ಟಿ. ಕಾಯ್ದೆ ಜಾರಿಗೆ ಒತ್ತು ನೀಡಿರುವದಾಗಿ ಅಧಿಕಾರಿಗಳು ಬೊಟ್ಟು ಮಾಡಿದರು.

ಆತಂಕ ಬೇಡ: ಕೇಂದ್ರ ಸರಕು - ಶುಲ್ಕ ಸೇವಾ ತೆರಿಗೆ ಇಲಾಖೆಯ ಶಾಖೆ ಇಲ್ಲದಿರುವ ಬಗ್ಗೆ ಗಮನ ಸೆಳೆದಾಗ, ಈ ಬಗ್ಗೆ ವಾಣಿಜ್ಯೋದ್ಯಮಿ ಗಳು ಆತಂಕಗೊಳ್ಳುವ ಅಗತ್ಯವಿಲ್ಲ ವೆಂದ ಅವರುಗಳು, ಹಾಸನ ಕಚೇರಿಯ ಸಹಾಯಕ ಆಯುಕ್ತ ರಾಗಿರುವ ರಾಮಚಂದ್ರ - 8197945397 ಅಥವಾ ಮೈಸೂರು ಕಚೇರಿ ಅಧೀಕ್ಷಕ ವೆಂಕಟೇಶ್ -9343289694ರಲ್ಲಿ ಜಿಲ್ಲೆಯಿಂದ ಸಾರ್ವಜನಿಕರು ಸಂಪರ್ಕಿಸಿ ಗೊಂದಲ ಪರಿಹರಿಸಿಕೊಳ್ಳಲು ಸಲಹೆ ನೀಡಿದರು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಮಾಜೀ ಅಧ್ಯಕ್ಷ ಜಿ. ಚಿದ್ವಿಲಾಸ್, ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ವ್ಯಾಪಾರೋದ್ಯಮಿ ಬಿ.ಎಂ. ಧನಂಜಯ, ಹಾಗೂ ಇತರರು ಜಿ.ಎಸ್.ಟಿ. ಗೊಂದಲದ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮೈಸೂರು ಅಧೀಕ್ಷಕ ಜಿ.ಎನ್. ಶಶಿಧರ್, ಇನ್ಸ್‍ಪೆಕ್ಟರ್ ಬಿ.ಕೆ. ಮಾಚಯ್ಯ ಈ ಸಂದರ್ಭ ಹಾಜರಿದ್ದರು.