ಕುಶಾಲನಗರ, ಮಾ. 5: ಸರಕಾರಿ ದಾಖಲೆಗಳನ್ನು ತಿದ್ದಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯೊಬ್ಬರಿಗೆ ಕೋಟಿಗಟ್ಟಲೆ ಬೆಲೆಬಾಳುವ ಜಾಗವನ್ನು ಪರಭಾರೆ ಮಾಡಿದ ಪ್ರಕರಣವೊಂದು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿನ್ನೆಲೆ ಕೊಡಗು ಜಿಲ್ಲಾಧಿಕಾರಿಗಳ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.

ಕುಶಾಲನಗರ ಮಾರುಕಟ್ಟೆ ಆವರಣದಲ್ಲಿರುವ ಸರ್ವೆ ನಂ. 111 ರ 0.86 ವಿಸ್ತೀರ್ಣದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವ ಪ್ರಕರಣ ಇದಾಗಿದೆ. ಕೋಟಿಗಟ್ಟಲೆ ಬೆಲೆಬಾಳುವ ಈ ಸರಕಾರಿ ಜಾಗವನ್ನು 2007 ರಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿಗಳು ಶಾಮೀಲಾಗಿ ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿದೆ. 1938 ರಲ್ಲಿ ಅನುಭವ ಹೊಂದಿದ ವ್ಯಕ್ತಿಯೊಬ್ಬರ 0.06 ಸೆಂಟ್ ಅಳತೆಯ ಜಾಗವನ್ನು ಮಹಿಳೆಯ ಹೆಸರಿಗೆ 0.86 ಎಕರೆ ಜಾಗದ ದಾಖಲೆ ಸೃಷ್ಟಿಸಿರುವದು ಪರಿಶೀಲನೆ ಸಂದರ್ಭ ಬೆಳಕಿಗೆ ಬಂದಿದೆ.

2004 ರಲ್ಲಿ ಈ ಜಾಗದ ಹಕ್ಕುದಾರಿಕೆಗಾಗಿ ಅರ್ಜಿ ಸಲ್ಲಿಸಿರುವ ಮಹಿಳೆಯೊಂದಿಗೆ ಪಂಚಾಯಿತಿಯ ಅಧಿಕಾರಿ, ಸಿಬ್ಬಂದಿಗಳು ಶಾಮೀಲಾಗಿ ನಕಲಿ ದಾಖಲೆಗಳ ಮೂಲಕ ಸರಕಾರಿ ಆಸ್ತಿಯನ್ನು ಕಬಳಿಸುವ ನಿಟ್ಟಿನಲ್ಲಿ ದಾಖಲೆ ಸೃಷ್ಟಿಸಿರುವದಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ಪತ್ತೆ ಹಚ್ಚಿ ಪಂಚಾಯಿತಿ ಪರ ತೀರ್ಪು ನೀಡಿದೆ. ಈ ನಡುವೆ ತನ್ನ ಜಾಗವೆಂದು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿ ನಂತರ ಅದು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಪುನರ್ ವಿಮರ್ಶೆಗೆ ಕಳುಹಿಸಲಾಗಿತ್ತು. ಮೂಲ ದಾಖಲೆಗಳ ಪ್ರಕಾರ 1927 ರಿಂದ 2014 ರ ತನಕ ಕಂದಾಯ ಇಲಾಖೆ ಅಥವಾ ಪಟ್ಟಣ ಪಂಚಾಯಿತಿ ದಾಖಲೆಗಳ ಮೂಲಕ ಪರಿಶೀಲಿಸಿದಾಗ ಹಕ್ಕು ವರ್ಗಾವಣೆಯಾಗಿಲ್ಲದಿರುವದು ಖಾತ್ರಿಯಾಗಿದೆ. ಹಳೆಯ ನಕಾಶೆಗಳನ್ನು ತಿದ್ದುಪಡಿ ಮಾಡಿರುವದು ಕಂಡುಬಂದಿದ್ದು, ಹಿಂದಿನ ದಾಖಲೆಗೆ ಸಹಿ ಹಾಕಿದ ಪಾರುಪತ್ತೆಗಾರರ ನಕ್ಷೆ ಹಾಗೂ ನಕಲಿ ದಾಖಲೆಗೂ ವ್ಯತ್ಯಾಸ ಕಂಡುಬಂದಿದೆ. ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿದ್ದು ಪಂಚಾಯಿತಿ ಪರವಾಗಿ ತೀರ್ಪು ಹೊರಬಿದ್ದಿದೆ. ಈ ಹಿನ್ನೆಲೆ ದಾಖಲೆಗಳನ್ನು ತಿದ್ದುಪಡಿ ಮಾಡಿರುವ ಸಂಬಂಧ ಮಹಿಳೆಯ ಮೇಲೆ ಹಾಗೂ ಪ್ರಕರಣಕ್ಕೆ ಸಹಕರಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಒಟ್ಟು 21 ಭೂ ಹಗರಣಗಳು ಈಗಾಗಲೇ ನ್ಯಾಯಾಲಯದಲ್ಲಿದ್ದು ಎಕರೆಗಟ್ಟಲೆ ಭೂಮಿಯನ್ನು ಪಂಚಾಯಿತಿಯ ಅಧಿಕಾರಿಗಳು ನಕಲಿ ದಾಖಲೆ ಮೂಲಕ ಪರಭಾರೆ ಮಾಡಿರುವದು ಬೆಳಕಿಗೆ ಬಂದಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ. ಚರಣ್ ತಿಳಿಸಿದ್ದಾರೆ. ಅಂದಾಜು 100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬೆಲೆಬಾಳುವ ಸರಕಾರಿ ಆಸ್ತಿಯನ್ನು ಸರಕಾರಿ ಅಧಿಕಾರಿಗಳು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿರುವದು ಕಾಣಬಹುದು.

ವಿಶೇಷ ಸಭೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ತುರ್ತು ಸಭೆ ಕರೆದು ಎಂ.ಎಂ. ಚರಣ್ ಅವರ ಅಧ್ಯಕ್ಷತೆಯಲ್ಲಿ ಚರ್ಚಿಸ ಲಾಯಿತು.

ಪಂಚಾಯಿತಿ ವ್ಯಾಪ್ತಿಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೆ ನಂ. 111 ರ 0.86 ಎಕರೆ ಜಾಗದ ದಾಖಲೆಗಳನ್ನು ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ಕಮಲಮ್ಮ ಎಂಬ ಮಹಿಳೆ ಹಾಗೂ ಈ ಪ್ರಕರಣಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸದಸ್ಯರುಗಳ ನಡುವೆ ಚರ್ಚೆ ನಡೆಯಿತು.

ಆದರೆ ಸಭೆಗೆ ಪಂಚಾಯಿತಿಯ ಕಾನೂನು ಸಲಹೆಗಾರರ ಗೈರು ಹಾಜರಿಯಿಂದ ಯಾವದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲದ ಹಿನ್ನೆಲೆ ಸಭೆಯನ್ನು ಮುಂದೂಡಲಾಯಿತು.