ಗೋಣಿಕೊಪ್ಪಲು, ಮಾ. 5: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2017-18 ನೇ ಸಾಲಿನಲ್ಲಿ ನಿವೇಶನ, ಹಕ್ಕುಪತ್ರ ಹೊಂದಿರುವವರಿಗೆ ಬಸವ ವಸತಿ ಯೋಜನೆಯಲ್ಲಿ 27 ಮನೆಗಳು ಹಾಗೂ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 41 ಮನೆಗಳನ್ನು ನಿರ್ಮಾಣ ಮಾಡಲು ಅವಕಾಶವಿದ್ದು, ರೂ.32 ಸಾವಿರ ಆದಾಯ ಮಿತಿ ಹೊಂದಿರುವ ಫಲಾನುಭವಿಗಳು ಕೇವಲ 6 ಮಂದಿ ಮಾತ್ರಾ ಇದ್ದಾರೆ. ವಸತಿ ನಿರ್ಮಿಸಲು ರೂ.1,65,000 ಮತ್ತು ಶೌಚಾಲಯ ನಿರ್ಮಾಣಕ್ಕೆ ರೂ.21,000 ಅನುದಾನ ಹಂತ ಹಂತವಾಗಿ ಒದಗಿಸಲಾಗುವದು. ಯಾವದೇ ಶಿಥಿಲಾವಸ್ಥೆಯ ಮನೆಯಲ್ಲಿ ವಾಸ ಇರುವವರು ಇದ್ದಲ್ಲಿ ಅಂತಹವರಿಗೂ ಮನೆ ಕೆಡವಿ ನೂತನ ಮನೆ ನಿರ್ಮಾಣಕ್ಕೆ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗುವದು ಎಂದು ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರು ಮಾಹಿತಿ ನೀಡಿದರು. ಹೊಸೂರು ಶ್ರೀ ಮಹಾದೇವರ ದೇವಸ್ಥಾನ ಸಮೀಪ ಸುವರ್ಣ ಗ್ರಾಮ ಸಮುದಾಯ ಭವನದಲ್ಲಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಅವರು ಉತ್ತರಿಸಿದರು.
ಹೊಸೂರು ಗ್ರಾಮದಲ್ಲಿ ಒಟ್ಟಾರೆಯಾಗಿ 438 ನಿವೇಶನ ರಹಿತರಿದ್ದು, ಹೊಸೂರು, ಬೆಟ್ಟಕೇರಿ, ಕಳತ್ಮಾಡು, ಗೊಟ್ಟಡ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನ ಗುರುತಿಸಿ ಆದ್ಯತೆ ಮೇರೆ ಎಲ್ಲ ಫಲಾನುಭವಿಗಳಿಗೂ ಹಂಚಿಕೆ ಮಾಡಲಾಗುವದು. ಯಾರಾದರೂ ಎಕರೆವಾರು ನಿವೇಶನ ಮಾರಾಟ ಮಾಡುವವರಿದ್ದರೆ, ಸರ್ಕಾರಿ ದರಕ್ಕಿಂತಲೂ ಮೂರು ಪಟ್ಟು ಅಧಿಕ ದರ ನೀಡಿ ಖರೀದಿಸಿ, ನಿವೇಶನ ಹಂಚಲು ಕಂದಾಯ ಇಲಾಖೆ ಸಿದ್ಧವಿದೆ ಎಂದು ಹೇಳಿದರು. ಹೊಸೂರು ಗ್ರಾಮದ ನಿವಾಸಿಗಳು ಇಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿ, ದಿಡ್ಡಳ್ಳಿ ನಿರಾಶ್ರಿತರ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಲ್ಲಿ ಜಿಲ್ಲಾಧಿಕಾರಿಗಳು ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಅಂತಹವರನ್ನು ಪಟ್ಟಿಯಿಂದ ಕೈಬಿಡಲಾಗುವದು ಎಂದು ಹೇಳಿದರಲ್ಲದೆ, ಒಬ್ಬ ವ್ಯಕ್ತಿಗೆ ಎರಡು ನಿವೇಶನ ಕಾನೂನಿನಲ್ಲಿ ಒದಗಿಸಲು ಅವಕಾಶವಿಲ್ಲ ಎಂದು ನುಡಿದರು.
ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಡಿತರ ಚೀಟಿ ವಿತರಣೆ, ಡಿಜಿಟಲ್ ವ್ಯವಹಾರದ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಂದ ಗ್ರಾಮಸ್ಥರಿಗೆ ಅರಿವು ಕಾರ್ಯಕ್ರಮ ಏರ್ಪಡಿಸಲಾಗುವದು ಎಂದು ಸಭೆಯಲ್ಲಿ ಪ್ರಕಟಿಸಲಾಯಿತು.
ಅಮ್ಮತ್ತಿ ಜಿ.ಪಂ.ಕ್ಷೇತ್ರದ ಸದಸ್ಯ, ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ ಮಾತನಾಡಿ, ಗ್ರಾಮ ಸಭೆಗೆ ಎಲ್ಲ ಅಧಿಕಾರಿಗಳ ಹಾಜರಾತಿ ಅಗತ್ಯ. ಜನರ ಸಮಸ್ಯೆ ಆಲಿಸಿ ಪರಿಹಾರ ಮಾರ್ಗ ಕಂಡುಕೊಳ್ಳಲು ಇದು ವೇದಿಕೆಯಾಗಿದೆ. ಸರ್ಕಾರ ನಿಯಮಾನುಸಾರ ಅರ್ಜಿ ಸಲ್ಲಿಸಿದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವದು. ಅಕ್ಷರ ದಾಸೋಹದ ಅಧಿಕಾರಿಗಳು ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸು ವಂತಾಗಬೇಕು. ಗ್ರಾಮದಲ್ಲಿ ಗಾಂಜಾ ಮಾರಾಟ ಹಾಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ತಡೆಗಟ್ಟಲು ಪೆÇಲೀಸ್ ಕಡಿವಾಣ ಅಗತ್ಯ. ಪೆÇಲೀಸರು ರಾತ್ರಿ ಗಸ್ತು ತಿರುಗುವ ಅವಶ್ಯಕತೆ ಇದೆ ಎಂದು ಹೇಳಿದರು. ನಾಡಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಕೆಲಸಮಾಡಲಾಗುವದು ಎಂದು ಹೇಳಿದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯಾ ಅವರು ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಮೀನು ಮರಿಗಳ ವಿತರಣೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸ್ವಾತಂತ್ರ್ಯಹೋರಾಟಗಾರ ಪಂದ್ಯಂಡ ಬೆಳ್ಯಪ್ಪ ಅವರು ಹೊಸೂರು ಗ್ರಾಮದಲ್ಲಿ ಜನಿಸಿದ್ದು, ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಗ್ರಾಮ ಸಭೆ ಆರಂಭವಾಯಿತು. ವೇದಿಕೆಯಲ್ಲಿ ಪಿಡಿಓ ಶ್ರೀನಿವಾಸ್, ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ನರಸಿಂಹ, ಧನು ಪೂಣಚ್ಚ, ಲಲಿತಾ, ಲಕ್ಷ್ಮಿ, ಕಾವೇರಮ್ಮ, ಶಾಂತಿ ಸೋಮಯ್ಯ, ಶಾರದಾ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಇದೇ ಸಂದರ್ಭ ವಿಕಲಚೇತನರಿಗೆ ಸೋಲಾರ್ ಲ್ಯಾಂಪ್ ವಿತರಿಸಲಾಯಿತು.