ರೋಸ್ ದ್ವೀಪದಿಂದ ಅದೇ ಫೆರಿ ಬೋಟ್‍ನಲ್ಲಿ ನಾರ್ತ್ ಬೇ ದ್ವೀಪಕ್ಕೆ ಹದಿನೈದು ನಿಮಿಷ ಗಳಲ್ಲಿ ತಲುಪಿದೆವು. ಇದು ಮುಖ್ಯವಾಗಿ ಹವಳದ ರೀಷ್‍ಗಳನ್ನೊಳಗೊಂಡ ದ್ವೀಪ ತೀರ. ನಾವೆಲ್ಲರೂ ಲೈಫ್ ಜಾಕೆಟ್ ಧರಿಸಿ ಗ್ಲಾಸ್ ಬೋಟ್ ಹತ್ತಿದೆವು. ತೀರ ಬಿಟ್ಟು ಸ್ವಲ್ಪ ಸಮುದ್ರದ ಒಳ ಹೋದಂತೆ, ನಾವಿದ್ದ ಬೋಟ್ ಮಧ್ಯೆ ಇದ್ದ ಗಾಜಿನ ಶೀಟ್ ಮೂಲಕ ಸಮುದ್ರದ ತಳ ನೋಡುತ್ತಿದ್ದಂತೆ ಬಣ್ಣ-ಬಣ್ಣದ ಸುಂದರ ಹವಳದ ಕಾಲೋನಿ ಗಳು ಕಾಣಿಸುತ್ತಿದ್ದುವು. ನಾನಾ ಜಾತಿಯ ಕೆಂಪು, ಹಳದಿ, ನೀಲಿ, ಬಿಳಿ ಬಣ್ಣದ ಚಿಕ್ಕ, ದೊಡ್ಡ ಮೀನುಗಳು ಹವಳದ ಕಾಲೋನಿಗಳ ಸುತ್ತಲೂ ಓಡಾಡುವದು ಕಾಣಿಸುತ್ತಿದ್ದವು. ಇದೊಂದು ಅಪರೂಪದ ದೃಶ್ಯ. ಹದಿನೈದು ನಿಮಿಷ ಇವುಗಳನ್ನು ವೀಕ್ಷಿಸುತ್ತಾ ಮರಳಿ ದ್ವೀಪ ತೀರಕ್ಕೆ ಬಂದೆವು. ಕೆಲವು ಯುವಕರು ಸ್ಕೂಬಾ ಡೈವಿಂಗ್‍ಗೆ ತೆರಳಿದ್ದರು. ನಾವು ತೀರದ ಉದ್ದಕ್ಕೂ ನಡೆದು ಗುಡ್ಡದ ಮೇಲಿರುವ ಲೈಟ್ ಹೌಸ್ ನೋಡಲು ಹೋದೆವು. ನಮ್ಮ 20ರೂ. ನೋಟಿನಲ್ಲಿ ಒಂದು ಬೀಚ್, ಒಂದು ಲೈಟ್ ಹೌಸ್, ಮತ್ತು ತೆಂಗಿನ ಮರಗಳ ಚಿತ್ರಣವಿದೆ. ಇದು ನಾರ್ತ್ ಬೇ ದ್ವೀಪದ ಅಮೋಘ ಕೊಡುಗೆ. ಹವಳ ಮತ್ತು ಮುತ್ತುಗಳನ್ನು ಮಾರುವ ಅಂಗಡಿಗಳ ನೋಡುತ್ತಾ ನಮ್ಮ ಬೋಟ್‍ಗೆ ವಾಪಸ್ಸು ಬಂದೆವು. ಇದು ಜೆಟ್ಟಿಯನ್ನು ತಲುಪಿದ ಕೂಡಲೇ ಮತ್ತೊಂದು ಫೆರಿ ಬೋಟ್ ಹತ್ತಿ ವೈಪರ್ ಐಲ್ಯಾಂಡ್‍ಗೆ ಹೊರಟೆವು. ಇದು ಹತ್ತಿರದಲ್ಲೇ ಇರುವ ದ್ವೀಪ. ಇಲ್ಲಿ ವಿಷಪೂರಿತ ವೈಪರ್ ಹಾವುಗಳಿವೆ. ಎನ್ನುತ್ತಾರೆ. ಇಲ್ಲಿ ಬಿಟೀಷರು ಕೈದಿಗಳನ್ನು ಗಲ್ಲಿಗೇರಿಸುತ್ತಿದ್ದರು. ಇಲ್ಲಿ ಚಿಕ್ಕದಾದ ಒಂದು ಚೈನ್ ಗ್ಯಾಂಗ್ ಜೈಲಿದೆ. ಜನರಲ್ ಬ್ಲೇರ್ ಇದನ್ನು ಕಟ್ಟಿಸಿದ್ದು, ಅವನ ಕ್ರೂರತೆಗೆ ಇದೊಂದು ಸಾಕ್ಷಿ. ಗುಡ್ಡದ ಮೇಲೆ ಗಲ್ಲಿಗೇರಲ್ಪಡುವ ಅಮಾಯಕರನ್ನು ಈ ಜೈಲಿನಲ್ಲಿರುವ ಎಲ್ಲಾ ಕೈದಿಗಳು ನೋಡುವಂತೆ ಕಟ್ಟಲಾಗಿದೆ. ಈ ದ್ವೀಪದಲ್ಲಿ ಸೂರ್ಯಾಸ್ತಮ ವಾಗುವ ಅಪೂರ್ವ ಕ್ಷಣಗಳು ಅತಿ ಸುಂದರ ಕೆಂಬಣ್ಣದ ಸೂರ್ಯಬಿಂಬ ಸಮುದ್ರದಲ್ಲಿ ಬೆರೆತು ಹೂಗುವ ದೃಶ್ಯ ವರ್ಣಿಸಲು ಸಾಧ್ಯವಿಲ್ಲ.

ಮರುದಿವಸ ಹೆವ್ ಲಾಕ್ ದ್ವೀಪಕ್ಕೆ ಹೋಗುವ ಕಾರ್ಯಕ್ರಮವಿತ್ತು. ಎಂಟು ಗಂಟೆಗೆ ಹೊರಟ ಜೆಟ್ಟಿ ಹತ್ತೂವರೆ ಗಂಟೆಗೆ ಹೆವ್‍ಲಾಕ್ ತಲುಪಿತು. ಈ ಯಾನಕ್ಕೆ ತಲಾ 600 ರೂ. ದರ ನಮ್ಮ ಟ್ಯಾಕ್ಸಿ ಚಾಲಕ ಅಗತ್ಯವಿರುವಲ್ಲಿ ಸರಕಾರಿ ಅನುಮತಿ ಪತ್ರ ಪಡೆಯುತ್ತಿದ್ದ. ಟ್ಯಾಕ್ಸಿಯಲ್ಲಿ 12 ಕಿ.ಮೀ. ದೂರದ ರಾಧಾನಗರ ಬೀಚ್ ತಲುಪಿದೆವು. ಇದು ಬಿಳಿ ಮರಳಿನ ತೀರದ ಕಣ್ಣಳತೆಗೂ ಎಟುಕದ ಉದ್ದವಾದ ಸುಂದರವಾದ ಬೀಚ್. ವಿಶಾಲವಾದ ಭೋರ್ಗರೆಯುವ ಹಸಿರು ಮಿಶ್ರಿತ ನೀಲಿ ಸಮುದ್ರ, ಹತ್ತಾರು ಅಡಿ ಮೇಲಕ್ಕೇರಿ, ನಿಧಾನವಾಗಿ ಸಮುದ್ರದ ಒಳ ಸೇರುವ ಬಿಳಿ ನೊರೆಯ ಅಲೆಗಳು, ಈಜುಡುಗೆ ಧರಿಸಿ ನೀರಿನಲ್ಲಿ ಮುಳುಗೇಳುವ ವಿದೇಶಿಯರು. ಸಮುದ್ರದ ಒಳಹೊಕ್ಕು, ನಿಧಾನವಾಗಿ ಹೊರಬರುವ ಸಾಹಸಿ ಯುವಕರು, ಕಣ್ಣಲ್ಲಿ ಕಣ್ಣಿಟ್ಟು ಅವರನ್ನೆಲ್ಲಾ ರಕ್ಷಿಸಲು ನಿಂತಿರುವ ಕೋಸ್ಟ್ ಗಾರ್ಡ್‍ಗಳು ಸ್ವಚ್ಛ ಭಾರತಕ್ಕೆ ಮತ್ತೊಂದು ಹೆಸರು ರಾಧಾನಗರ ಬೀಚ್. ಒಂದು ಗಂಟೆ ಅಲ್ಲೇ ವಿಹರಿಸಿ, ಫೆರಿ ಪಾಯಿಂಟ್‍ಗೆ ವಾಪಸ್ಸು ಬಂದೆವು. ಮತ್ತೊಂದು ಫೆರಿ ಬೋಟಿಗೆ ಟಿಕೇಟ್ ಖರೀದಿಸಿ 40 ನಿಮಿಷ ಪ್ರಯಾಣದ ಎಲಿಫೆಂಟ್ ಬೀಚ್‍ಗೆ ಬಂದೆವು. ಇಲ್ಲಿ ಹವಳ ರೀಷ್‍ಗಳನ್ನು ನೋಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಅಧಿಕ ಪ್ರಮಾಣದಲ್ಲಿ ಕಾಣಸಿಗುವ ಹವಳ ರೀಫ್‍ಗಳು ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಅಲ್ಲದೆ ಸ್ಕೂಬಾ ಡೈವಿಂಗ್ ಸ್ನೊರ ಕೆಲಿಂಗ್, ಗ್ಲಾಸ್ ಬೋಟ್ ರೈಡಿಂಗ್ ಸಾಯಂಕಾಲದ ವರೆಗೂ ನಡೆಯುತ್ತದೆ. ನಾವು ಮರಳಿ ಹೆವಲಾಕ್‍ನಲ್ಲಿ ನಿಂತಿದ್ದ ನಮ್ಮ ಫೆರಿಗೆ ತಲಪಿದೆವು. ಮರುಪ್ರಯಾಣದಲ್ಲಿ ನಮ್ಮೊಡನೆ ಫೆÉರಿಯಲ್ಲಿ ಮೂವತ್ತು ಪ್ರವಾಸಿಗರಿದ್ದ ತುಮಕೂರಿನ ತಂಡ ಬಹಳ ಮೋಜು ಮಾಡಿದರು. ಡೆಕ್‍ನಲ್ಲಿ ಹಾಕಿದ್ದ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದದ್ದೇ ಕುಣಿದದ್ದು. ನಾವು ಸೂರ್ಯಾಸ್ತಮವನ್ನು ವೀಕ್ಷಿಸುತ್ತಾ ಡೆಕ್ಕಿನ ಬದಿಯಲ್ಲಿ ನಿಂತು ಕೊಂಡೆವು. ಸೂರ್ಯಾಸ್ತಮ ವಾಗುತ್ತಿದ್ದಂತೆ ಸಮುದ್ರದ ಬಣ್ಣ ಬದಲಾಗುತ್ತಿತ್ತು. ಕೆಂಪು ಬಣ್ಣದ ಸೂರ್ಯ ತನ್ನ ಚೆಲುವನ್ನೆಲ್ಲಾ ಸಮುದ್ರಕ್ಕೆ ಧಾರೆ ಎರೆದಂತೆ ಕಾಣಿಸುತ್ತಿತ್ತು. ನೋಡ ನೋಡುತ್ತಿದ್ದಂತೆ ಆಗಸ ಭೂಮಿ ಯನ್ನು ಕತ್ತಲೆಗೆ ದೂಡಿತು. ನಮ್ಮ ಶಿಪ್ ಪೋರ್ಟ್ ಬ್ಲೇರ್ ಜೆಟ್ಟಿ ಸೇರಿತು. ಮರುದಿವಸ ಬಾರಾಟಂಗ್ ದ್ವೀಪಕ್ಕೆ ಪ್ರಯಾಣ ಬೆಳಗಿನ ಜಾವ ಮೂರು ಗಂಟೆಗೆ ಸಿದ್ಧರಾಗಿ ನಮ್ಮ ಟ್ಯಾಕ್ಸಿ ಬಂದ ಕೂಡಲೇ ಹೋಟೇಲ್‍ನವರು ಸಿದ್ಧಪಡಿಸಿಕೊಟ್ಟ ಆಹಾರ ಪ್ಯಾಕ್ ನೊಡನೆ ಟ್ಯಾಕ್ಸಿ ಏರಿದೆವು. ಏಕಕಾಲದಲ್ಲಿ ಎಲ್ಲಾ ಟ್ಯಾಕ್ಸಿಗಳು ಪೋರ್ಟ್ ಬ್ಲೇರಿಂದ ಬಾರಾಟಂಗ್‍ಗೆ ಹೊರಡುತ್ತದೆ. ಬಹಳ ವೇಗವಾಗಿ ಈ ಗಾಡಿಗಳು ಟ್ರಂಕ್ ರೋಡಿನಲ್ಲಿ ಚಲಿಸುತ್ತವೆ. ಜಾರವಾ ಆದಿವಾಸಿಗಳನ್ನು ನೋಡುವ ಸಲುವಾಗಿಯೇ ಈ ದ್ವೀಪಕ್ಕೆ ಪ್ರವಾಸ ಕೈಗೊಳ್ಳುವುದು. ಅವರು ಬೆಳಗಿನ ಜಾವದಲ್ಲಿ ಮಾತ್ರ ಕಾಣಸಿಗುವುದು ಇವರು ನಗ್ನವಾಗಿಯೇ ಇರುತ್ತಾರೆ. ಇವರು ನಾಗರಿಕತೆಯಿಂದ ವಿಮುಖರಾಗಿರುವ ಪ್ರೊಟೆಕ್ಟ್‍ಡ್ ಟ್ರೈಬ್. ಆರು ಗಂಟೆಗೆಲ್ಲಾ ಅಲ್ಲಿಗೆ ತಲುಪಿದೆವು. ಅರಣ್ಯಾಧಿಕಾರಿಗಳ ಅಪ್ಪಣೆ ದೊರೆತ ಕೂಡಲೇ ಎಲ್ಲಾ ವಾಹನಗಳು ಈ ಸಂರಕ್ಷಿತ ಅರಣ್ಯದೊಳಗೆ ಒಂದರ ಹಿಂದೆ ಒಂದಂತೆ ಚಲಿಸತೊಡಗಿತು. ರಸ್ತೆ ಬದಿಯ ಕಾಡಿನಂಚಿನಲ್ಲಿ ನಿಂತಿರುವ ಜರವಾ ಆದಿವಾಸಿ ಗಳನ್ನು ನೋಡಿ ಯಾರೂ ನಗುವ ಹಾಗಿಲ್ಲ. ಅವರ ಭಾವಚಿತ್ರ ತೆಗೆಯುವಂತಿಲ್ಲ. ಹಾಸ್ಯ ಮಾಡಿವಂತಿಲ್ಲ. ಇವೆಲ್ಲವೂ ನಿಷಿದ್ಧ. ಕಾನೂನಿಗೆ ವಿರುದ್ಧವಾಗಿ ನಡೆದರೆ ಸೆರೆಮನೆ ವಾಸ ಖಚಿತ. ಕೆಲವೊಮ್ಮೆ ಕ್ರೂರ ಆದಿವಾಸಿಗಳಿಂದ ಹತ್ಯೆಯಾಗು ವುದು ನಿಜ. ವಾಹನಗಳೊಡನೆ ಪೊಲೀಸ್ ಬೆಂಗಾವಲು ಇರುತ್ತದೆ. ಪೋರ್ಟ್ ಬ್ಲೇರಿಂದ ಇಲ್ಲಿಗೆ ನೂರು ಕಿ.ಮೀ. ದೂರವಿದೆ.

(ಮುಂದುವರಿಯುವದು)