ಕುಶಾಲನಗರ, ಮಾ. 6: ಕುಶಾಲನಗರ ಪಟ್ಟಣ ಪಂಚಾಯಿತಿ ಅಕ್ರಮ ಭೂ ದಂಧೆಕೋರರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಪಂಚಾಯ್ತಿ ಆಡಳಿತ ಮಂಡಳಿ ಕಠಿಣ ನಿರ್ಣಯ ಕೈಗೊಂಡಿದೆ. ಪಟ್ಟಣದಲ್ಲಿ ಸರಕಾರಿ ಆಸ್ತಿಯನ್ನು ಕೆಲವು ಅಧಿಕಾರಿಗಳು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಶೇಷ ಸಾಮಾನ್ಯ ಸಭೆ ನಡೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಹಾಗೂ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಕುಶಾಲನಗರ ಪಟ್ಟಣ ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆಯು ಇಂದು ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿ ವ್ಯಾಪ್ತಿಯ 3ನೇ ಬ್ಲಾಕ್ನಲ್ಲಿರುವ ಮಾರುಕಟ್ಟೆ ಆವರಣದ 0.86 ಎಕರೆ ಜಾಗದ ದಾಖಲೆಯನ್ನು ತಿದ್ದುಪಡಿ ಮಾಡಿರುವ ಮಹಿಳೆಯೊಬ್ಬರು ಸೇರಿದಂತೆ ಈ ಪ್ರಕರಣಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪಂಚಾಯಿತಿ ಮುಖ್ಯಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು. ಈ ಪ್ರಕರಣದಲ್ಲಿ ಮಾರುಕಟ್ಟೆ ಆವರಣದ ಕೋಟಿಗಟ್ಟಲೆ ಬೆಲೆಬಾಳುವ ಜಾಗದ ದಾಖಲೆಯನ್ನು ನಕಲಿ ಸೃಷ್ಟಿಸಿ ಮಾದಾಪಟ್ಟಣ ಗ್ರಾಮದ ಜಾಗದ ದಾಖಲೆಯನ್ನು ಮಾರುಕಟ್ಟೆಯ ಖಾತೆಗೆ ಸೇರ್ಪಡೆಗೊಳಿಸಿ ನಕಲಿ ದಾಖಲೆ ಸೃಷ್ಟಿಸಲಾಗಿರುವದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದೃಢಪಟ್ಟಿದೆ. ಈ ಬಗ್ಗೆ ಸಭೆ ಗಂಭೀರವಾಗಿ ಪರಿಗಣಿಸಿತು.
(ಮೊದಲ ಪುಟದಿಂದ) ಪಂಚಾಯಿತಿ ಸಭೆಯಲ್ಲಿ ಉಪಸ್ಥಿತರಿದ್ದ ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರಬಾಬು ಪ್ರಕರಣದ ಸಂಪೂರ್ಣ ಮಾಹಿತಿ ಒದಗಿಸಿದರು. ಈ ನಿಟ್ಟಿನಲ್ಲಿ ಹಿರಿಯ ಸದಸ್ಯ ಹೆಚ್.ಜೆ. ಕರಿಯಪ್ಪ, ಉಪಾಧ್ಯಕ್ಷÀ ಟಿ.ಆರ್. ಶರವಣಕುಮಾರ್, ಕೆ. ಪ್ರಮೋದ್ ಮುತ್ತಪ್ಪ, ಹೆಚ್.ಡಿ. ಚಂದ್ರು ನಂಜುಂಡಸ್ವಾಮಿ ಅವರುಗಳು ಇಂತಹ ಪ್ರಕರಣಗಳಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಈ ಪ್ರಕರಣ ಸೇರಿದಂತೆ ಕುಶಾಲನಗರದ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಮಣ್ಣನ ಛತ್ರ, ಚೆಟ್ಟಡ್ಕ ಸೋಮಯ್ಯನವರ ಜಾಗ, ಅಂಚೆ ಕಚೇರಿ ಜಾಗ, ಸರ್ವೆ ನಂ. 127 ಮತ್ತು 165 ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರಿ ಜಮೀನು ಹಾಗೂ ಕಡಂಗಗಳನ್ನು ನಕಲಿ ದಾಖಲೆ ಸೃಷ್ಟಿಸುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿದರು. ಈ ಬಗ್ಗೆ ಸಭೆ ಸರ್ವಾನುಮತದಿಂದ ನಿರ್ಣಯಿಸಿತು.
ಸರಕಾರದ ಜಾಗ ಪರಭಾರೆಯಾಗುತ್ತಿರುವ ಬಗ್ಗೆ ಪಂಚಾಯಿತಿ ಸದಸ್ಯರು ಎಚ್ಚರವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಫಲರಾಗುವ ಸದಸ್ಯರು ಪಂಚಾಯಿತಿ ಕಾಯ್ದೆಯನ್ವಯ ಸದಸ್ಯತ್ವ ಅನರ್ಹತೆಗೆ ಒಳಗಾಗುತ್ತಾರೆ ಎಂದು ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರಬಾಬು ಸಭೆಯ ಗಮನಕ್ಕೆ ತಂದರು. ಆಡಳಿತ ಮಂಡಳಿ ಸರ್ವಾನುಮತದಿಂದ ನಿರ್ಣಯಕ್ಕೆ ಬಂದು ಜಾಗದ ದಾಖಲೆಗಳನ್ನು ತಿದ್ದುಪಡಿ ಮಾಡಿದ ವ್ಯಕ್ತಿಗಳು ಹಾಗೂ ಪ್ರಕರಣಕ್ಕೆ ಸಹಕರಿಸಿ ಸರಕಾರಿ ದಾಖಲೆಗಳನ್ನು ತಿದ್ದಿ ನಕಲಿ ದಾಖಲೆ ಸೃಷ್ಟಿಸಿದ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಿರ್ಣಯ ಅಂಗೀಕರಿಸಿತು.
ವಿಶೇಷ ಸಭೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಂ. ಮಧುಸೂದನ್, ಮಾಜಿ ಅಧ್ಯಕ್ಷ ಡಿ.ಕೆ. ತಿಮಪ್ಪ, ಸದಸ್ಯರುಗಳಾದ ಹೆಚ್.ಕೆ. ಪಾರ್ವತಿ, ಕೆ.ಆರ್. ರೇಣುಕಾ ಗೈರಾಗಿದ್ದರು.