ಸುಂಟಿಕೊಪ್ಪ, ಮಾ. 5: ಸುಂಟಿಕೊಪ್ಪ ಕೊಡಗರಹಳ್ಳಿ ಅಂದಗೋವೆ, ನಾಕೂರು-ಶಿರಂಗಾಲ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಅಂದಗೋವೆಗೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಲ್ಲಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ವಿವಿಧ ಸಂಘಟನೆ ಸದಸ್ಯರು ಪಂಚಾಯಿತಿ ಜನಪ್ರತಿನಿಧಿಗಳು ಮನವಿ ಮಾಡಿಕೊಂಡರು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಸಂದರ್ಭ ಜನಪ್ರತಿನಿಧಿಗಳು, ಗ್ರಾಮಸ್ಥರು ಸೇರಿ ಹದಗೆಟ್ಟ ರಸ್ತೆಯ ಪರಿಸ್ಥಿತಿ ನೋಡುವಂತೆ ವೀಣಾ ಅಚ್ಚಯ್ಯ ಅವರನ್ನು ಕರೆದೊಯ್ದರು.
ಎರಡು ಗ್ರಾಮ ಪಂಚಾಯಿತಿಗೆ ಸೇರಿದ ಜನತೆಗೆ ಹಾಗೂ ಸೋಮವಾರಪೇಟೆ ಹಾಗೂ ಕುಶಾಲನಗರ ಗ್ರಾಮಗಳಿಗೆ ಸಂಪರ್ಕ ಈ ರಸ್ತೆಯಾಗಿದ್ದು, ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ ಕಳಪೆ ಕಾಮಗಾರಿಯಿಂದ ಸಂಪೂರ್ಣ ಹೊಂಡಗಳಾಗಿ ನಿರ್ಮಾಣಗೊಂಡಿದ್ದು, ಈ ಭಾಗದ ಜನತೆಯ ನೋವು ಹೇಳ ತೀರದಾಗಿದೆ. ಬೇಸಿಗೆಯಲ್ಲಿ ವಾಹನ ಸವಾರರು ವಾಹನಗಳನ್ನು ಚಾಲಿಸಲು ಹರಸಾಹಸ ಪಡುವಂತಾಗಿದೆ ಎಂದು ಗ್ರಾಮದ ನಿವಾಸಿಗಳು ಅಳಲು ತೋಡಿಕೊಂಡರು.
ಪಾದಚಾರಿಗಳು ರಸ್ತೆಯಲ್ಲಿ ನಡೆದಾಡಲು ಸಹ ಕಷ್ಟಸಾಧ್ಯವಾಗಿದೆ. ಈ ರಸ್ತೆ ಹದಗೆಟ್ಟ ಹಿನ್ನೆಲೆ ಅಂದಗೋವೆ, ನಾಕೂರು, ಹೆರೂರು ಮಾರ್ಗವಾಗಿ ಕುಶಾಲನಗರಕ್ಕೆ ಸಂಚರಿಸುತ್ತಿದ್ದ ಸರಕಾರಿ ಬಸ್ ಸ್ಥಗಿತಗೊಂಡಿದೆ. ಗ್ರಾಮದ ಬಡಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ನೂರಾರು ರೂಪಾಯಿ ವ್ಯಯಿಸಿ ಖಾಸಗಿ ವಾಹನಗಳ ಮೂಲಕ ತೆರಳುವಂತಾಗಿದೆ. ಮಳೆಗಾಲಕ್ಕೂ ಮುಂಚಿತವಾಗಿ ರಸ್ತೆಯನ್ನು ದುರಸ್ತಿಪಡಿಸಲು ಅನುದಾನ ಒದಗಿಸುವಂತೆ ವೀಣಾ ಅಚ್ಚಯ್ಯ ಅವರಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ವೀಣಾ ಅಚ್ಚಯ್ಯ ಹಾಗೂ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರುಗಳು ರಸ್ತೆ ದುರಸ್ತಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಯಾ ಯೋಜನೆ ತಯಾರಿಸುವ ಮೂಲಕ ಸರಕಾರದ ಗಮನಕ್ಕೆ ತರುವದರೊಂದಿಗೆ ಹೆಚ್ಚಿನ ಅನುದಾನ ಒದಗಿಸುವ ಭರವಸೆಯಿತ್ತರು.
ಈ ಸಂದರ್ಭ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್, ಸುಂಟಿಕೊಪ್ಪ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ನಾಕೂರು-ಶಿರಂಗಾಲ ಪಂಚಾಯಿತಿ ಸದಸ್ಯ ಚಂದ್ರಶೇಖರ್, ಸಮಾಜ ಸೇವಕ ಜಾನ್, ಲಯನ್ಸ್ ಕ್ಲಬ್ ಅಧ್ಯಕ್ಷ ಶಾಶ್ವತ್ ಬೋಪಣ್ಣ, ಕಾಫಿ ಬೆಳೆಗಾರರಾದ ಕೋಟೆರ ಶಂಭು ಚಂಗಪ್ಪ, ಸ್ಯಾಮ್ಸನ್, ಮಾಜಿ ಸದಸ್ಯ ಚೋಮಣಿ, ಭಾಗೇಶ್ ನಾಕೂರು-ಕಾನ್ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಪದಾಧಿಕಾರಿಗಳು, ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಸದಸ್ಯರು ಆಟೋ ಚಾಲಕರು, ಕಾಫಿ ತೋಟದ ಮಾಲೀಕರುಗಳು ಹಾಗೂ ಗ್ರಾಮಸ್ಥರು ಇದ್ದರು.