ಸಿದ್ದಾಪುರ, ಮಾ. 6: ಮಕ್ಕಳು ಸರಿಯಾಗಿ ‘ಹೋಮ್ ವರ್ಕ್’ ಮಾಡಿಲ್ಲವೆಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೇಬಲ್ ವೈರ್‍ನಿಂದ ಥಳಿಸಿದ ಘಟನೆ ಸಮೀಪದ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ನೆಲ್ಯಹುದಿಕೇರಿ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕಿ ಬಿಂದ್ಯಾ ಎಂಬವರು 9ನೇ ತರಗತಿಯ ವಿದ್ಯಾರ್ಥಿಗಳು ಹೋಮ್ ವರ್ಕ್ ಮಾಡಿಲ್ಲವೆಂದು ಮಕ್ಕಳ ಬೆನ್ನಿಗೆ ಹಿಗ್ಗಾ ಮುಗ್ಗಾ ಬಾರಿಸಿದ್ದಾರೆ. ಹುಡುಗಿಯರು ಸೇರಿದಂತೆ 10ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾವಾಗಿದೆ ಎನ್ನಲಾಗಿದೆ. ಸಂಜೆ ಮನೆಗೆ ತೆರಳಿದ ವಿದ್ಯಾರ್ಥಿಗಳು ಬಟ್ಟೆ ಬಿಚ್ಚಿದಾಗ ರಕ್ತದ ಕಲೆಯನ್ನು ಕಂಡ ಪೋಷಕರು ಮರು ದಿನ ಶಾಲೆಗೆ ತೆರಳಿ ವಿಚಾರಿಸಿದ್ದಾರೆ. ಈ ಸಂದರ್ಭ ಶಿಕ್ಷಕಿ ಬಿಂದ್ಯ ಪೋಷಕರೊಂದಿಗೆ ಒರಟಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಜಿಮ್ಮಿ ಸಿಕ್ವೇರ ಮಧ್ಯ ಪ್ರವೇಶಿಸಿ ಪೋಷಕರ ತುರ್ತು ಸಭೆ ಕರೆದು ಪರಿಸ್ಥಿತಿ ತಿಳಿಗೊಳಿದರು. ಸಭೆಯಲ್ಲಿ ಶಿಕ್ಷಕಿ ಬಿಂದ್ಯಾ ಕ್ಷಮೆ ಕೇಳಿದ್ದರಿಂದ ಪೋಷಕರು ದೂರು ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇನ್ನು ಮುಂದೆ ಮಕ್ಕಳ ಮೇಲೆ ಈ ರೀತಿಯ ಹಲ್ಲೆ ಆದ್ದಲ್ಲಿ ಪೊಲೀಸ್ ದೂರು ನೀಡುವದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭ ಸ್ಥಳೀಯ ಗ್ರಾ.ಪಂ. ಸದಸ್ಯರು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.